ತಮಿಳುನಾಡಿನಲ್ಲಿ ಮತ್ತೆ ಗದ್ದುಗೆ ಏರಲು ‘ಅಮ್ಮಾ’ ಸಜ್ಜು

Update: 2016-05-19 17:43 GMT

ಚೆನ್ನೈ,ಮೇ 19: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಎಡಿಎಂಕೆ ಭಾರೀ ಗೆಲುವು ಸಾಧಿಸುವ ಮೂಲಕ ಸತತ ಎರಡನೆ ಅವಧಿಗೆ ಅಧಿಕಾರದ ಗದ್ದುಗೆಯನ್ನೇರಲು ಸಜ್ಜಾಗಿದೆ. ತನ್ಮೂಲಕ ಕಳೆದ 32 ವರ್ಷಗಳಿಂದ ಪಕ್ಷವೊಂದು ರಾಜ್ಯದಲ್ಲಿ ಸತತ ಎರಡನೆ ಅವಧಿಗೆ ಅಧಿಕಾರಕ್ಕೇರುವಲ್ಲಿ ವಿಫಲವಾಗುತ್ತಿದ್ದ ಸಂಪ್ರದಾಯಕ್ಕೆ ಅಂತ್ಯ ಹಾಡಿದೆ. 1984ರಿಂದ ಈ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವೂ ಸತತ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದಿರಲಿಲ್ಲ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಎಡಿಎಂಕೆ 135 ಸ್ಥಾನಗಳನ್ನು ಗೆದ್ದಿದ್ದರೆ,ಡಿಎಂಕೆ ಮೈತ್ರಿಕೂಟವು 97 ಸ್ಥ್ಥಾನಗಳಲ್ಲಷ್ಟೇ ಗೆಲುವು ದಾಖಲಿಸಲು ಸಾಧ್ಯವಾಗಿದೆ.

ನನ್ನಲ್ಲಿ ವಿಶ್ವಾಸವನ್ನು ಮುಂದುವರಿಸಿದ್ದಕ್ಕಾಗಿ ತಮಿಳುನಾಡು ಜನತೆಗೆ ನನ್ನ ಧನ್ಯವಾದಗಳು. ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನ್ನಲ್ಲಿ ಶಬ್ದಗಳಿಲ್ಲ ಎಂದು ಹರ್ಷದಿಂದ ಬೀಗುತ್ತಿದ್ದ ಎಡಿಎಂಕೆ ಅಧಿನಾಯಕಿ ಹಾಗೂ ಮುಖ್ಯಮಂತ್ರಿ ಜೆ.ಜಯಲಲಿತಾ ಹೇಳಿದರು.

ಜಯಲಲಿತಾ ಡಾ.ಆರ್.ಕೆ.ನಗರ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿ ಶಿಮಳಾ ಮುತ್ತೋಳನ್ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರ ಬದ್ಧವೈರಿ ಡಿಎಂಕೆ ನಾಯಕ ಎಂ.ಕರುಣಾನಿಧಿಯವರು ತಿರುವರೂರು ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರೆ ಅವರ ಪುತ್ರ ಎಂ.ಕೆ.ಸ್ಟಾಲಿನ್ ಕೊತ್ತಲೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News