ಈಶಾನ್ಯ ಭಾರತಕ್ಕೆ ಬಿಜೆಪಿ ಲಗ್ಗೆ

Update: 2016-05-19 18:18 GMT

ಗುವಾಹಟಿ, ಮೇ 19: ಗುರುವಾರ ನಡೆದ ಮತಎಣಿಕೆಯಲ್ಲಿ ಬಿಜೆಪಿಯು ಅಸ್ಸಾಮಿನಲ್ಲಿ ಭಾರೀ ಗೆಲುವು ಸಾಧಿಸಿದೆ. ತನ್ಮೂಲಕ ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ತನ್ನ ಸರಕಾರ ರಚಿಸುವ ಮೂಲಕ ಇತಿಹಾಸ ಸೃಷ್ಟಿಸುತ್ತಿದೆ. ವಿಧಾನಸಭಾ ಚುನಾವಣಾ ಫಲಿತಾಂಶವು ಅಸ್ಸಾಮಿನಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಿದೆ. ಕಳೆದ ಚುನಾವಣೆಯಲ್ಲಿ ತರುಣ್ ಗೊಗೊಯ್ ನೇತೃತ್ವದಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ದಾಖಲಿಸಿತ್ತು. ಆದರೆ ನಾಲ್ಕನೆ ಅವಧಿಗೆ ಅಧಿಕಾರಕ್ಕೆ ಮರಳುವ ಕಾಂಗ್ರೆಸಿನ ಕನಸನ್ನು ಅಸ್ಸಾಂ ಜನತೆ ನುಚ್ಚುನೂರಾಗಿಸಿದ್ದಾರೆ.

ಕೇಂದ್ರ ಸಚಿವ ಸರಬಾನಂದ ಸೊನೊವಾಲ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಅಸೋಮ್ ಗಣ ಪರಿಷದ್ ಮತ್ತು ಬೋಡೊ ಪೀಪಲ್ಸ್ ಫ್ರಂಟ್ ಭಾರೀ ವಿಜಯ ಸಾಧಿಸಿವೆ.

126 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 61,ಎಜಿಪಿ 14 ಮತ್ತು ಬಿಪಿಎಫ್ 12 ಸ್ಥಾನಗಳನ್ನು ಗೆದ್ದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಐದು ಸ್ಥಾನಗಳನ್ನು ಗೆದ್ದಿದ್ದರೆ,ಎಜಿಪಿ 10 ಮತ್ತು ಬಿಪಿಎಫ್ 12 ಸ್ಥಾನಗಳನ್ನು ಪಡೆದಿದ್ದವು. ಆಗ 78 ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್ ಈ ಬಾರಿ 25 ಸ್ಥಾನಗಳನ್ನಷ್ಟೇ ಗೆದ್ದುಕೊಳ್ಳಲು ಶಕ್ತವಾಗಿದೆ.

ಹುದ್ದೆಯಿಂದ ಕೆಳಗಿಳಿಯಲಿರುವ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ಟಿಟಾಬರ್ ಕ್ಷೇತ್ರದಲ್ಲಿ ಮತ್ತು ಭಾವಿ ಮುಖ್ಯಮಂತ್ರಿ ಸರಬಾನಂದ ಸೊನೊವಾಲ್ ಅವರು ಮಜುಲಿ(ಎಸ್‌ಟಿ) ಕ್ಷೇತ್ರದಲ್ಲಿ ಗೆಲುವು ಪಡೆದಿದ್ದಾರೆ. ಎಜಿಪಿ ಅಧ್ಯಕ್ಷ ಅತುಲ್ ಬೋರಾ ಅವರು ಬೊಕಾಖಾತ್ ಕ್ಷೇತ್ರದಲ್ಲಿ ಹಾಲಿ ಶಾಸಕ ಅರುಣ ಫುಕಾನ್(ಕಾಂ) ಅವರನ್ನು ಪರಾಭವಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News