ಹೆಲಿಕಾಪ್ಟರ್ ಹಗರಣಕ್ಕೆ ಇಸ್ರೇಲ್ ಕನೆಕ್ಷನ್ ?

Update: 2016-05-20 03:22 GMT

ಹೊಸದಿಲ್ಲಿ, ಮೇ 20: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಕಾನೂನು ಜಾರಿ ನಿರ್ದೇಶನಾಲಯ, ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದು, ಹಗರಣಕ್ಕೆ ಇಸ್ರೇಲ್ ಸಂಬಂಧ ಇರುವ ವಿಚಾರ ಬೆಳಕಿಗೆ ಬಂದಿದೆ. ಇಟೆಲಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯಿಂದ ಲಂಚ ಹಣವನ್ನು ಇಸ್ರೇಲ್‌ನ ಕಂಪನಿಯೊಂದಕ್ಕೆ ವರ್ಗಾಯಿಸಿರುವುದು ಬಹಿರಂಗವಾಗಿದೆ. ಬಹುಶಃ ಟ್ಯುನೇಶಿಯಾದ ಐಡಿಎಸ್ ಮೂಲಕ ಈ ಹಣ ವರ್ಗಾವಣೆಯಾಗಿರಬೇಕು ಎಂದು ನಂಬಲಾಗಿದೆ.

"ಇಸ್ರೇಲ್‌ನಲ್ಲಿ ಕೂಡಾ ಕಂಪನಿ ಆರಂಭಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಭಾರತಕ್ಕೆ ಲಂಚದ ಹಣ ಬರುವ ಮುನ್ನ ಆ ಕಂಪನಿಗೆ ಹಣ ವರ್ಗಾವಣೆಯಾಗಿತ್ತು" ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ವಿವರಣೆ ಕೇಳಿ ಇಸ್ರೇಲಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ. ಇಸ್ರೇಲ್ ಹೊರತಾಗಿ ನಿರ್ದೇಶನಾಲಯ, ಇಟೆಲಿ, ಟ್ಯುನೇಶಿಯಾ, ಇಂಗ್ಲೆಂಡ್, ಸ್ವಿಡ್ಜರ್‌ಲೆಂಡ್, ಯುಎಇ, ಸಿಂಗಾಪುರ, ಮರಿಷಿಯಸ್, ಡೆನ್ಮಾರ್ಕ್ ಹಾಗೂ ಫಿನ್‌ಲೆಂಡ್‌ಗೆ ಕೂಡಾ ಪತ್ರ ಬರೆದಿದೆ.

ಟ್ಯುನೇಶಿಯಾದಲ್ಲಿ ಐಡಿಎಸ್ ಕಂಪನಿ ಆರಂಭಿಸಿದ ಬಳಿಕ, ಯೂರೋಪ್‌ನ ಮಧ್ಯವರ್ತಿ ಕಾರ್ಲೊ ಗೆರೋಸಾ ಹಾಗೂ ಗ್ಯೂಡೊ ಹಶ್ಚೆ ಮತ್ತು ಭಾರತದ ವಕೀಲ ಗೌತಮ್ ಖೇತಾನ್, 24.6 ದಶಲಕ್ಷ ಯೂರೊ (160 ಕೋಟಿ ರೂಪಾಯಿ) ಹಣವನ್ನು ಅಗಸ್ಟಾದಿಂದ ಪಡೆದಿದ್ದಾರೆ. ಈ ಪೈಕಿ 3.88 ದಶಲಕ್ಷ ಯೂರೊ ಹಣವನ್ನು ಏರೊಮ್ಯಾಟ್ರಿಕ್ಸ್ ಇನ್ಫೋ ಸೊಲ್ಯೂಶನ್ಸ್‌ಗೆ ವರ್ಗಾಯಿಸಲಾಗಿದೆ. 1.88 ದಶಲಕ್ಷ ಯೂರೊ ಹಣವನ್ನು ಐಡಿಎಸ್‌ಗೆ ವರ್ಗಾಯಿಸಲಾಗಿದೆ. ಉಳಿದ 18.94 ದಶಲಕ್ಷ ಯೂರೊ ಹಣವನ್ನು ಐಡಿಎಸ್ ಉಳಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News