ಬಿಸಿಲ ಬೇಗೆಗೆ ಕುದಿಯುತ್ತಿದೆಉತ್ತರ-ಮಧ್ಯ ಭಾರತ

Update: 2016-05-20 18:25 GMT

ಹೊಸದಿಲ್ಲಿ, ಮೇ 20: ದೇಶಾದ್ಯಂತ ಹಲವು ರಾಜ್ಯಗಳು ಬಿಸಿಲ ಬೇಗೆಯಿಂದ ಕುದಿಯುತ್ತಿವೆ. ತಾಪಮಾನವು ದಾಖಲೆ ಎತ್ತರಕ್ಕೆ ತಲುಪಿದೆ. ಇದು ತಕ್ಷಣಕ್ಕೆ ಪರಿಹಾರವಾಗುವ ಲಕ್ಷಣ ಕಾಣಿಸುತ್ತಿಲ್ಲ. ಏರುತ್ತಿರುವ ಉಷ್ಣತೆಯ ಉತ್ತರ ಹಾಗೂ ಮಧ್ಯ ಭಾರತದ ಹಲವು ಭಾಗಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ.

ರಾಜಸ್ಥಾನದ ಜೋಧ್‌ಪುರದ ಫಲೋಡಿಯಲ್ಲಿ ಗುರುವಾರ ತಾಪಮಾನ 51 ಡಿಗ್ರಿ ಸೆಂಟಿಗ್ರೇಡ್‌ಗೇರಿತ್ತು. 1956ರ ಬಳಿಕ ದೇಶದಲ್ಲೇ ಇದು ದಾಖಲೆಯ ಗರಿಷ್ಠ ಉಷ್ಣತೆಯಾಗಿದೆ.
ಚುರುವಿನಲ್ಲಿ 52.2, ಬಿಕಾನೇಕ ಹಾಗೂ ಬಾರ್ಮೇರ್‌ಗಳಲ್ಲಿ 49.5, ಗಂಗಾ ನಗರದಲ್ಲಿ 49.1, ಜೈಸಲ್ಮೇರ್‌ನಲ್ಲಿ 49, ಕೊಟಾದಲ್ಲಿ 48.2 ಹಾಗೂ ಜೈಪುರದಲ್ಲಿ 46.5 ಡಿಗ್ರಿ ಸೆಲಿಶಿಯಸ್ ಉಷ್ಣಾಂಶ ದಾಖಲಾಗಿದೆ.
ಅಹ್ಮದಾಬಾದ್‌ನಲ್ಲಿ ಭಾರೀ ತಾಪಮಾನವು 100 ವರ್ಷಗಳ ದಾಖಲೆಯನ್ನು ಮುರಿದಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 48 ಡಿಗ್ರಿ ಸೆಂಟಿಗ್ರೇಡ್‌ಗೆ ತಲುಪಿದೆ.
ಉತ್ತರಪ್ರದೇಶವು ಒಣಹವೆ ಹಾಗೂ ತೀವ್ರ ಉಷ್ಣ ಮಾರುತದಿಂದಾಗಿ ಕಾದ ಕಾವಲಿಯಂತಾಗಿದೆ. ರಾಜ್ಯದಲ್ಲಿ ಬಂಡಾ, ಗರಿಷ್ಠ 47.2 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ದಾಖಲಿಸುವುದರೊಂದಿಗೆ ಸತತ ಮೂರನೆ ದಿನವೂ ಅತ್ಯಂತ ಬಿಸಿಯಾದ ಸ್ಥಳವೆನಿಸಿದೆ. ಅಲಹಾಬಾದ್‌ನಲ್ಲಿ 46.7, ಝಾನ್ಸಿಯಲ್ಲಿ 46.4 ಹಾಗೂ ಒರಾಯಿಯಲ್ಲಿ 46 ಡಿಗ್ರಿ ಸೆಲಿಶಿಯಸ್ ಉಷ್ಣತೆ ದಾಖಲಾಗಿದೆ.
ಗುರುವಾರ 44.4 ಡಿಗ್ರಿ ಸೆಲಿಶಿಯಸ್ ಉಷ್ಣತೆ ದಾಖಲಾಗಿದ್ದ ಲಕ್ನೊದಲ್ಲಿ ಮೇ 23ರಿಂದ ಬೇಸಗೆಯ ರಜೆಯನ್ನು ಘೋಷಿಸುವಂತೆ ಶಾಲೆಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ದಿಲ್ಲಿಯ ನಿವಾಸಿಗಳೂ ಸೆಕೆಯಿಂದ ಬಳಲುತ್ತಿದ್ದಾರೆ. ಆಗಾಗ ವಿದ್ಯುತ್ ವೈಫಲ್ಯವು ಇದಕ್ಕೆ ಇನ್ನಷ್ಟು ಇಂಧನ ಸುರಿಯುತ್ತಿದೆ.
ಗುರುವಾರ ದಿಲ್ಲಿಯಲ್ಲಿ ವಿದ್ಯುತ್ ಬೇಡಿಕೆಯು ಮೊದಲ ಬಾರಿಗೆ 6 ಸಾವಿರ ಮೆ.ವಾ.ಗಿಂತಲೂ ಅಧಿಕವಾಗಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ಹರ್ಯಾಣ ಹಾಗೂ ಪಂಜಾಬ್‌ಗಳೂ ಉಷ್ಣ ಮಾರುತದ ಸುಳಿಯಲ್ಲಿ ಸಿಲುಕಿವೆ. ಈ ಎರಡು ರಾಜ್ಯಗಳಲ್ಲಿ ಗುರುವಾರ ಹಂಗಾಮಿನಲ್ಲೇ ಅತ್ಯಂತ ಉಷ್ಣತೆಯ ದಿನವಾಗಿತ್ತು.
ಹರ್ಯಾಣದ ಹಿಸಾರ್‌ನಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚಾಗಿ 46.8 ಡಿಗ್ರಿ ಸೆಂಟಿಗ್ರೇಡ್‌ಗೆ ತಲುಪಿತ್ತು.
ಗುಜರಾತ್, ಪೂರ್ವ ಹಾಗೂ ಪಶ್ಚಿಮ ರಾಜಸ್ಥಾನ, ಪಶ್ಚಿಮ ಹಾಗೂ ಪೂರ್ವ ಉತ್ತರಪ್ರದೇಶ ವಿದರ್ಭ. ಪಶ್ಚಿಮ ಹಾಗೂ ಪೂರ್ವ ಮಧ್ಯಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ತೀವ್ರ ಉಷ್ಣ ಮಾರುತ ಬೀಸಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ನೆಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News