ಗುರ್ಗಾಂವ್ ಆಪಲ್ ಶೋರೂಂನಲ್ಲಿ ‘ನಕಲಿ ಐಫೋನ್ ಕವರ್’ ಪತ್ತೆ ಹಚ್ಚಿದ ಸಿಇಒ ಕುಕ್ !

Update: 2016-05-21 08:12 GMT

ಹೊಸದಿಲ್ಲಿ, ಮೇ 21 : ಶುಕ್ರವಾರ ಆಪಲ್ ಸಿಇಒ ಟಿಮ್ ಕುಕ್ ಗುರ್ಗಾಂವ್ ನಗರದ ಗಲೇರಿಯಾ ಮಾರ್ಕೆಟ್ ನಲ್ಲಿರುವ ಆಪಲ್ ಶೋರೂಂಗೆ ಹೋಗಿದ್ದ ಸಂದರ್ಭ ಅಲ್ಲಿದ್ದ ‘ನಕಲಿ’ ಉತ್ಪನ್ನವೊಂದರ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು. ಶೋರೂಂನ ಅಧಿಕಾರಿಗಳು ಹಾಗೂ ಉದ್ಯೋಗಿಗಳಿಗೆ ದೊಡ್ಡ ಶಾಕ್ ಆದರೂ ಕೂಡಲೇ ಸಾವರಿಸಿಕೊಂಡು ಆ ಉತ್ಪನ್ನ-ಹಸಿರು-ನೀಲಿ ಬಣ್ಣದ ಐಫೋನ್ ಕವರ್ ಅಸಲಿಯೆಂಬುದನ್ನು ಪತ್ತೆ ಹಚ್ಚಿದರು. ಆ ಬಣ್ಣದ ಮತ್ತು ಆ ರೀತಿಯ ಪ್ಯಾಕೇಜಿಂಗ್ ನ ಆಪಲ್ ಉತ್ಪನ್ನ ಅಮೇರಿಕಾ ಶೋರೂಂನಲ್ಲಿ ಲಭ್ಯವಿಲ್ಲದೇ ಇರುವುದು ಈ ಗೊಂದಲ್ಲಕ್ಕೆ ಕಾರಣವಾಗಿರಬಹುದಾದರೂ ಇಂತಹ ಒಂದು ಘಟನೆ ನಡೆದಿದೆಯೆಂಬುದನ್ನು ಆಪಲ್ ಅಧಿಕಾರಿಗಳು ದೃಢಪಡಿಸಿಲ್ಲ.

ಭಾರತಕ್ಕೆ ಮಂಗಳವಾರ ಆಗಮಿಸಿದಾಗಿನಿಂದ ಟಿಮ್ ಕುಕ್ ಅವರು ಕಂಪೆನಿಯ ಕಾರ್ಯಾಚರಣೆಯನ್ನು ಪರೀಕ್ಷಿಸಿದರಲ್ಲದೆ ಹಲವು ಆ್ಯಪ್ ಡೆವಲೆಪರ್ಸ್‌ ಗಳನ್ನೂ ಭೇಟಿ ಮಾಡಿದರು. ಕಾನ್ಪುರಕ್ಕೆ ತೆರಳಿ ಟಿ-20 ಪಂದ್ಯಾಟವೊಂದನ್ನೂ ಅವರು ವೀಕ್ಷಿಸಿದರು.

ಶುಕ್ರವಾರ ಆಪಲ್ ಕಂಪೆನಿಯ ಭಾರತದ ಉದ್ಯೋಗಿಗಳನ್ನು ಭೇಟಿಯಾದ ಕುಕ್ ನಂತರ ಭಾರತಿ ಏರ್ ಟೆಲ್ ಕಂಪೆನಿಯ ಸುನಿಲ್ ಮಿತ್ತಲ್ ಹಾಗೂ ಮೆಸೆಂಜರ್ ಆ್ಯಪ್ ಹೈಕ್ ನಡೆಸುವ ಅವರ ಪುತ್ರ ಕೆವಿನ್ ಅವರನ್ನು ಭೇಟಿಯಾದರು. ಆಹಾರ ಎಗ್ರಿಗೇಟರ್ ಸಂಸ್ಥೆ ಝೊಮ್ಯಾಟೋ ಸ್ಥಾಪಕ ದೀಪೇಂದರ್ ಗೋಯಲ್ ಹಾಗೂ ಅವರ ಸಿಬ್ಬಂದಿಯನ್ನೂ ಭೇಟಿಯಾಗಿ ಅವರು ಮಾತುಕತೆ ನಡೆಸಿದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿರುವ ಕುಕ್ ಅವರಿಗೆ ತಮ್ಮ ಕಂಪೆನಿಯ ಯೋಜನೆಗಳನ್ನು ವಿವರಿಸಲಿದ್ದಾರೆ. ಐಫೋನ್ ಗಳಂತಹ ಅತ್ಯಾಧುನಿಕ ಸಾಧನಗಳನ್ನು ಉತ್ಪಾದಿಸಲು ಭಾರತದ ಮಾರುಕಟ್ಟೆ ಇನ್ನೂ ಪ್ರಬುದ್ಧತೆ ಸಾಧಿಸುವ ಅಗತ್ಯವಿರುವುದರಿಂದ ಇಲ್ಲಿ ಐಫೋನ್ ಉತ್ಪಾದಿಸುವ ವಿಚಾರವಾಗಿ ಅವರು ಯಾವುದೇ ತಕ್ಷಣದ ಘೋಷಣೆ ಮಾಡುವ ಸಾಧ್ಯತೆ ಕಡಿಮೆಯೆಂದು ಹೇಳಲಾಗುತ್ತಿದೆ.

ಆದರೂ ಆಪಲ್ ಸಿಇಒ ತಾನು ಭಾರತವನ್ನು ‘ಭವಿಷ್ಯದ ಚೀನಾ" ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ. ಭಾರತದಲ್ಲಿ 4ಜಿ ನೆಟ್ ವರ್ಕ್ ಅಭಿವೃದ್ಧಿ ಕುಕ್ ಅವರಿಗೆ ಸಂತಸ ತಂದಿದೆಯೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News