ಸಿಬಿಎಸ್‌ಇ 12ನೆ ತರಗತಿ ಫಲಿತಾಂಶ: ಹುಡುಗಿಯರೇ ಮೇಲುಗೈ

Update: 2016-05-21 18:26 GMT

ದಿಲ್ಲಿಯ ಸುಕೃತಿ ಗುಪ್ತಾ ಟಾಪರ್

ದಕ್ಷಿಣ ಭಾರತ ಅತ್ಯುತ್ತಮ

ಹೊಸದಿಲ್ಲಿ, ಮೇ 21: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಇಂದು 12ನೆ ತರಗತಿಯ ಫಲಿತಾಂಶ ಘೋಷಿಸಿದೆ. ಈ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಅಗ್ರ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಿಲ್ಲಿಯ ಮೊನ್‌ಫೋರ್ಟ್ ಸ್ಕೂಲ್‌ನ ವಿದ್ಯಾರ್ಥಿನಿ ಸುಕೃತಿ ಗುಪ್ತಾ ಎಂಬಾಕೆ ದೇಶಕ್ಕೇ ಮೊದಲಿಗಳಾಗಿದ್ದು, 500ರಲ್ಲಿ 497 ಅಂಕ ಗಳಿಸಿದ್ದಾಳೆ.
ಹರ್ಯಾಣದ ಟಾಗೋರ್ ಪಬ್ಲಿಕ್ ಸ್ಕೂಲ್‌ನ ಪಾಲಕ್ ಗೋಯಲ್ ಎಂಬಾಕೆ 496 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾದರೆ, ಅದೇ ರಾಜ್ಯದ ಸೈಂಟ್ ತೆರೆಸಾ ಕಾನ್ವೆಂಟ್ ಸ್ಕೂಲ್‌ನ ಸೋಮ್ಯಾ ಉಪ್ಪಲ್ ಎಂಬಾಕೆ 495 ಅಂಕ ಪಡೆದು ಮೂರನೆ ಸ್ಥಾನ ಪಡೆದಿದ್ದಾರೆ.

ಹುಡುಗಿಯರ ಉತ್ತೀರ್ಣತೆಯು ಸರಾಸರಿ ಶೇ.88.58 ಆಗಿದ್ದು, ಹುಡುಗರಿಗಿಂತ ಹುಡುಗಿಯರೇ ಉತ್ತಮ ಸಾಧನೆ ತೋರಿಸಿದ್ದಾರೆ. ಹುಡುಗರ ಉತ್ತೀರ್ಣತೆಯ ಪ್ರಮಾಣ ಶೇ.78.85ರಷ್ಟಿದೆ.
ಒಟ್ಟಾರೆ ಫಲಿತಾಂಶ ಶೇ.83.05 ಆಗಿದ್ದು, ಕಳೆದ ವರ್ಷದ ಶೇ.82ಕ್ಕಿಂತ ಸುಧಾರಿಸಿದೆ.

ದಕ್ಷಿಣ ಭಾರತವು ಇತರ ವಲಯಗಳಿಗಿಂತ ಉತ್ತಮ ಸಾಧನೆ ದಾಖಲಿಸಿದೆ. ತಿರುವನಂತಪುರ ವಲಯದ ಶೇ.97.61 ಉತ್ತೀರ್ಣತೆ ಅತೀ ಹೆಚ್ಚಿನದಾಗಿದೆ. ಆ ಬಳಿಕದ ಸ್ಥಾನ ಶೇ.92.63 ಫಲಿತಾಂಶ ಪಡೆದ ಚೆನ್ನೈ ವಲಯದ್ದಾಗಿದೆ. ಸತತ ಎರಡನೆಯ ವರ್ಷ ಸಿಬಿಎಸ್‌ಇ ಎಲ್ಲ 10 ವಲಯಗಳ ಫಲಿತಾಂಶವನ್ನು ಒಂದೇ ದಿನ ಘೋಷಿಸಿದೆಯೆಂದು ದಿಲ್ಲಿಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ.

www.results.nic.in, www.cbseresults.nic.in ಹಾಗೂ www.cbse.nic.in ಜಾಲ ತಾಣಗಳಲ್ಲಿ ಫಲಿತಾಂಶವನ್ನು ನೋಡಬಹುದು.
ಈ ವರ್ಷ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಇದು ಕಳೆದ ವರ್ಷಕ್ಕಿಂತ ಶೇ.2.38ರಷ್ಟು ಹೆಚ್ಚಾಗಿದೆ. ಶಾಲೆಗಳಿಗೆ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರುವ ಇ-ಮೇಲ್ ಐಡಿಗಳಿಗೆ ಫಲಿತಾಂಶವು ಯಾಂತ್ರಿಕವಾಗಿ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News