ಸ್ಮೃತಿ ಇರಾನಿ ಹಾಗೂ 'ಪ್ರಿಯಾಂಕಾ' ಟ್ವಿಟರ್ ಜಗಳ್ಬಂದಿ

Update: 2016-05-23 08:51 GMT

ಹೊಸದಿಲ್ಲಿ, ಮೇ 23: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಸೋಮವಾರ ಟ್ವಿಟ್ಟರ್ ಯುದ್ಧವೊಂದರಲ್ಲಿ ತೊಡಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಾರೆ.

ಕಾಂಗ್ರೆಸ್ ನಾಯಕಿಯನ್ನು 'ನಿರ್ಭಯಾಳಂತೆ' ಅತ್ಯಾಚಾರ ಮತ್ತು ಕೊಲೆ ಮಾಡಲಾಗುವುದು ಎಂದು ಟ್ವಿಟ್ಟರಿನಲ್ಲಿ ಕೆಲ ದಿನಗಳ ಹಿಂದೆ ಬಂದ ಬೆದರಿಕೆಯ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ.

ಶೆಫಾಲಿ ವೈದ್ಯ ಎಂಬವರ ಟ್ವೀಟಿಗೆ ಪ್ರತಿಕ್ರಿಯೆಯಾಗಿ ಪ್ರಿಯಾಂಕಾ ಚತುರ್ವೇದಿ - @ ಸ್ಮತಿ ಇರಾನಿ ಜೀವಕ್ಕೆ ಝೆಡ್ ಸೆಕ್ಯುರಿಟಿಯಿದ್ದರೆ. ಇಲ್ಲಿ ನಾನು ನನಗೆ ಬಂದ ಅತ್ಯಾಚಾರ/ಕೊಲೆ ಬೆದರಿಕೆಗಳ ತನಿಖೆ ನಡೆಸಲು ಹೋರಾಡುತ್ತಿದ್ದೇನೆ,’’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಇರಾನಿ ‘‘ಐ ಡೋಂಟ್ ಹ್ಯಾವ್ ಝೆಡ್ ಸೆಕ್ಯುರಿಟಿ ಮ್ಯಾಡೆಮ್,’’ ಎಂದು ಟ್ವೀಟ್ ಮಾಡಿದ್ದರು. ಇರಾನಿಯವರ ಸುರಕ್ಷೆಯನ್ನು ಅತ್ಯಧಿಕ ಝೆಡ್ ಕೆಟಗರಿಗೆ ಉನ್ನತೀಕರಿಸುವ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಗಳು ಯೋಚಿಸುತ್ತಿದ್ದಾರೆಂದು ವರದಿಗಳು ಈಗಾಗಲೇ ತಿಳಿಸಿದ್ದು, ಆಕೆಯ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರಸಜ್ಜಿತ ಕಮಾಂಡೋ ಸುರಕ್ಷೆ ಒದಗಿಸಲಿದ್ದಾರೆಂದು ಹೇಳಲಾಗುತ್ತಿದೆ.

ಚತುರ್ವೇದಿ ಕೂಡ ಮಾಧ್ಯಮ ವರದಿಗಳನ್ನು ಉಲ್ಲೇಖಿಸುತ್ತಾ ‘‘ಹಾಗಾದರೆ ನಿಮಗೆ ಯಾವುದೇ ರಕ್ಷಣೆಯಿಲ್ಲವೆಂದು ಅಂದುಕೊಳ್ಳುತ್ತೇನೆ,’’ಎಂದು ಟ್ವೀಟ್ ಮಾಡಿದ್ದರು. ಟ್ವಿಟ್ಟರಿನಲ್ಲಿ ಸಾಕಷ್ಟು ಸಕ್ರಿಯರಾಗಿರುವ ಸಚಿವೆ ‘ನೀವೇಕೆ ನನ್ನ ಸುರಕ್ಷೆಯ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸುತ್ತಿದ್ದೀರಿ? ಏನಾದರೂ ಯೋಜನೆಗಳಿವೆಯೇ?’’ಎಂದು ಪ್ರಶ್ನಿಸಿದ್ದರು. ‘‘ನನ್ನ ಸಮಯ ಹಾಳುಗೆಡಹಲು ಇಚ್ಛೆಯಿಲ್ಲ, ಆ ಬಗ್ಗೆ ಚಿಂತಿಸಬೇಡಿ, ಇನ್ನೊಂದು ಕ್ಯಾಂಪಸ್ ಹಗರಣ ನಡೆಸುವತ್ತ ನೀವು ಗಮನ ಕೇಂದ್ರೀಕರಿಸಬೇಕು,’’ಎಂದು ಚತುರ್ವೇದಿ ಮರು ಟ್ವೀಟ್ ಮಾಡಿದ್ದರು.

ಇದಕ್ಕೆ ವ್ಯಂಗ್ಯದ ಮಾರುತ್ತರ ನೀಡಿದ ಇರಾನಿ ‘‘ಅದು ರಾಹುಲ್ ಕೆಲಸ. ಓಹ್. ಇಲ್ಲಿ. ಅಸ್ಸಾಂನಲ್ಲಿ ಸೋತಿರುವುದು ಬಹಳ ಕೆಟ್ಟದ್ದು. ಶುಭ ದಿನ’’ ಎಂದಿದ್ದರು.
ಇಷ್ಟಕ್ಕೇ ಬಿಡದ ಚತುರ್ವೇದಿ ‘‘ಹಲವಾರು ಬಾರಿ ಸೋತರೂ ಬಿಡದೆ ಕ್ಯಾಬಿನೆಟ್ ಸಚಿವರಾಗುವುದು ನಿಮ್ಮ ಕೆಲಸ. ನಿಮಗೂ ಅತ್ಯುತ್ತಮ ದಿನದ ಹಾರೈಕೆ,’’ ಎಂದಿದ್ದಾರೆ.
ಶಾಲಾ ಪಠ್ಯಗಳಲ್ಲಿ ಆರೆಸ್ಸೆಸ್ ಅಜೆಂಡಾವಾದ ಕೇಸರೀಕರಣವನ್ನು ಜಾರಿಗೊಳಿಸಲು ‘ಅವಿರತ’ ಶ್ರಮಿಸುತ್ತಿರುವ ಇರಾನಿಯವರನ್ನು ಚತುರ್ವೇದಿ ಕಟುವಾಗಿ ಟೀಕಿಸಿದ ಮರುದಿನ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News