ಮೋದಿ ಕಳೆದ 15 ವರ್ಷಗಳಲ್ಲಿ ಇರಾನ್ ಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ ಅಲ್ಲ

Update: 2016-05-24 08:56 GMT

ಹೊಸದಿಲ್ಲಿ, ಮೇ 24: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಹೋದಾಗಲೆಲ್ಲಾ ಅವರ ಭಕ್ತರು ಅದು ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿಯೆಂದು ಕೊಚ್ಚಿಕೊಂಡ ನಂತರ ಹಲವರು ಅದು ತಪ್ಪೆಂದು ಉದಾಹರಣೆ ಸಹಿತ ವಿವರಿಸಿದ ಪ್ರಸಂಗಗಳೂ ಇವೆ.

ಸೋಮವಾರ ಕೂಡ ನಡೆದಿದ್ದು ಅದೇ. ಪ್ರಧಾನಿಯ ಇರಾನ್ ಪ್ರವಾಸದ ವಿಚಾರದಲ್ಲಿ ಸೋಮವಾರ ಪ್ರಮುಖ ಮಾಧ್ಯಮ ಗುಂಪುಗಳಾದ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಎನ್‌ಡಿಟಿವಿ ತಮ್ಮ ವರದಿಗಳಲ್ಲಿ ಕಳೆದ 15 ವರ್ಷಗಳಲ್ಲಿ ಇರಾನ್ ಗೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿ ಮೋದಿಯೆಂದೂ ಇದಕ್ಕೂ ಮೊದಲು ಇನ್ನೊಬ್ಬ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಭೇಟಿ ನೀಡಿದ್ದರೆಂದೂ ವರದಿ ಮಾಡಿದ್ದವು.

ಸೋಮವಾರದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಹೀಗೆ ಬರೆದಿತ್ತು ‘‘ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಥಮ ಭೇಟಿಗಾಗಿ ಟೆಹರಾನ್ ಗೆ ಆಗಮಿಸಿದಾಗ ಅವರು ಅಟಲ್ ಬಿಹಾರಿ ವಾಜಪೇಯಿಯವರ ನಂತರ ಇರಾನ್‌ಗೆ ಕಳೆದ 15 ವರ್ಷಗಳಲ್ಲಿ ಭೇಟಿ ನೀಡಿದ ಪ್ರಥಮ ಪ್ರಧಾನಿಯಾಗಿದ್ದಾರೆ.

ಕೇವಲ ಐದು ದಿನಗಳ ಹಿಂದೆ ಇದೇ ಪತ್ರರ್ಕ ಮೋದಿ ಇರಾನ್ ಭೇಟಿ ವಿಚಾರದಲ್ಲಿ ಹೀಗೆ ಬರೆದಿದ್ದರು. ‘‘ಮೋದಿಯವರ ಇರಾನ್ ಭೇಟಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನ್ಯಾಮ್ ಅಧಿವೇಶನಕ್ಕೆ 2012ರಲ್ಲಿ ಭೇಟಿ ನೀಡಿದ ನಾಲ್ಕು ವರ್ಷಗಳ ನಂತರದ ಭೇಟಿಯಾಗಿದೆ,’’ಎಂದಿದ್ದರು.

ಆದರೆ ಸಾಮಾಜಿಕ ತಾಣಗಳಲ್ಲಿ ಕೂಡ ಹಲವರು ಮನಮೋಹನ್ ಸಿಂಗ್ 2012ರಲ್ಲಿ ಇರಾನ್ ಗೆ ಭೇಟಿ ನೀಡಿದ್ದನ್ನು ನೆನಪಿಸಿದ್ದಾರೆ. ಒಬ್ಬರಂತೂ ಸಿಂಗ್ ಅವರ ಇರಾನ್ ಭೇಟಿಯ ದೃಶ್ಯಾವಳಿಗಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್ ಸೈಟಿನ ಲಿಂಕೊಂದನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News