ದಿಲ್ಲಿ ಕುರಿತ ಉರ್ದು ಕವನದ ಸಾಲುಗಳನ್ನು ವಿರೂಪಗೊಳಿಸಿದ ‘ಸ್ವಚ್ಛ ಭಾರತ್ ಭಕ್ತರು’

Update: 2016-05-24 09:32 GMT

ಹೊಸದಿಲ್ಲಿ, ಮೇ 24 : ದಿಲ್ಲಿ ಸರಕಾರದ ಮೈ ದಿಲ್ಲಿ ಸ್ಟೋರಿ ಪ್ರಾಜೆಕ್ಟ್ ಅನ್ವಯ ದಿಲ್ಲಿ ಜಲ್ ಬೋರ್ಡ್ ಪಂಪಿಂಗ್ ಸ್ಟೇಶನ್ ಕಟ್ಟಡದ ಗೋಡೆಗಳಲ್ಲಿ ದಿಲ್ಲಿಯನ್ನು ಹೊಗಳಿ ಬರೆದ ಉರ್ದು ಕವನದ ಸಾಲುಗಳನ್ನು ಬರೆಯುತ್ತಿದ್ದ ಫ್ರೆಂಚ್ ಕಲಾವಿದ ಹಾಗೂ ಆತನ ಭಾರತೀಯ ಸಹಾಯಕನನ್ನು ಸುತ್ತುವರಿದ ‘ಸ್ವಚ್ಛ ಭಾರತ್ ಭಕ್ತರು’ ಅವರು ಬರೆದಿದ್ದನ್ನು ಅವರಿಂದಲೇ ಬಲವಂತವಾಗಿ ವಿರೂಪಗೊಳಿಸಿದ ಘಟನೆ ವರದಿಯಾಗಿದೆ.

ದಾಳಿಕೋರರ ಗುಂಪು ‘ಜೈಶ್ರೀರಾಂ’ ಘೋಷಣೆ ಕೂಗುತ್ತಿತ್ತಲ್ಲದೆ ಕಲಾವಿದರನ್ನು ‘ಲಹೋರಿ’ ಎಂದು ಹೀಗಳೆದಿತ್ತೆಂದು ಕಲಾವಿದರಲ್ಲೊಬ್ಬರಾದ ಅಖ್ಲಾಖ್ ಅಹ್ಮದ್ ಹೇಳಿದ್ದಾರೆ. ಹಿಂದಿ, ಇಂಗ್ಲಿಷ್ ಹಾಗೂ ಪಂಜಾಬಿ ಹೊರತಾಗಿ ಉರ್ದು ಕೂಡ ದೆಹಲಿಯ ರಾಜ್ಯ ಭಾಷೆಗಳಲ್ಲೊಂದಾಗಿದೆ.

ಕಲಾವಿದರ ಗುಂಪಾದ ಡೆಲ್ಲಿ ಐ ಲವ್ ಯೂ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು ಅದರಂಗವಾಗಿ ಹಲವು ಸಾರ್ವಜನಿಕ ಕಟ್ಟಡಗಳ ಗೋಡೆಗಳಲ್ಲಿ ನಾಲ್ಕು ಭಾಷೆಗಳ ದ್ವಿರುಕ್ತಿಗಳನ್ನು ಚಿತ್ತಾಕರ್ಷಕವಾಗಿ ಬರೆಯಲಿವೆ.

ದಿಲ್ಲಿ ಜಲ್ ಬೋರ್ಡ್ ಗೋಡೆಗಳಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೀಶನ್ ಅಮ್ಜದ್ ಬರೆದ ಕವನ ‘‘ದಿಲ್ಲಿ ತೇರಾ ಉರ್ನ, ಔರ್ ಫಿರ್ ಉಜರ್ ಕೆ ಬಸ್ನ, ವೋಹ್ ದಿಲ್ ಹೈ ತೂನೆ ಪಾಯಾ, ಸನಿ ನಹೀ ಹೈ ಜಿಸ್ಕಾ’’ ಬರೆಯಲಾಗುತಿತ್ತು.

‘‘ನಾವು ಪ್ರಥಮ ಸಾಲನ್ನು ಬರೆಯುವಷ್ಟರಲ್ಲಿ ಜನ ಸೇರಿ ನಾವೇಕೆ ಉರ್ದು ಭಾಷೆಯಲ್ಲಿ ಬರೆಯುತ್ತಿದ್ದೇವೆಂದು ನಮ್ಮನ್ನು ಪ್ರಶ್ನಿಸಿದರು,’’ಎಂದು ಶಬ್ಬು ಎಂದೇ ಜನಪ್ರಿಯರಾಗಿರುವ ಕಲಾವಿದ ಅಹ್ಮದ್ ಹೇಳುತ್ತಾರೆ. ‘‘ನಾವು ಇದೊಂದು ಸರಕಾರಿ ಯೋಜನೆ ಹಾಗೂ ಗೋಡೆಗಳಿಗೆ ಬರಹ ರೂಪದಲ್ಲಿ ಬಣ್ಣ ಹಚ್ಚಲು ನಮಗೆ ನೀಡಲಾದ ಅನುಮತಿ ಪತ್ರವನ್ನು ತೋರಿಸಿದರೂ ಅವರಲ್ಲೊಬ್ಬ ತಾನು ಆರೆಸ್ಸೆಸ್ಸಿನವನೆಂದೂ ಉರ್ದು ಭಾಷೆಯನ್ನು ಸಹಿಸುವ ಪ್ರಶ್ನೆಯಿಲ್ಲವೆಂದು ಹೇಳಿದನು. ಆಗ ಅಹ್ಮದ್ ತಮ್ಮನ್ನು ಶಬ್ಬು ಎಂದು ಪರಿಚಯಿಸಿದಾಗ ಅದನ್ನು ಶಂಭು ಎಂದು ಅರ್ಥೈಸಿ ಅವರು ಹಿಂದೂ ಎಂದು ತಿಳಿದ ತಂಡ ಫ್ರೆಂಚ್ ಕಲಾವಿದನತ್ತ ತಿರುಗಿ ಆತನನ್ನು ಪಾಕಿಸ್ತಾನಕ್ಕೆ ತೆರಳುವಂತೆ ಹೇಳಿತು. ‘‘ಆತ ಪಾಕಿಸ್ತಾನಿಯಲ್ಲ, ಬದಲಾಗಿ ಫ್ರಾನ್ಸಿನವನೆಂದೂ ಆತನನ್ನು ಬಿಟ್ಟು ಬಿಡಲು ನಾನು ಬೇಡಿಕೊಂಡೆ.’’ಎಂದು ಅಹ್ಮದ್ ವಿವರಿಸುತ್ತಾರೆ.

ಸುಮಾರು 150ರಷ್ಟಿದ್ದ ಗುಂಪು ಅಹ್ಮದ್ ಗೆ ಗೋಡೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ್ ಮತ್ತು ನರೇಂದ್ರ ಮೋದಿ ಎಂದು ಹಿಂದಿಯಲ್ಲಿ ಬರೆಯುವಂತೆ ಒತ್ತಾಯಿಸಿತು. ‘‘ನಾವು ಒಂದು ಗೆರೆ ಬರೆದು ಮುಗಿಸುತ್ತಿದ್ದಂತೆಯೇ ಪೊಲೀಸರು ಆಗಮಿಸಿದರು,’’ಎಂದು ಅಹ್ಮದ್ ಹೇಳುತಾರೆ.
ನಮ್ಮ ಮೊಬೈಲ್ ಕ್ಯಾಮರಾದಲ್ಲಿ ದಾಳಿಕೋರರ ಚಿತ್ರಗಳನ್ನು ತೆಗೆಯಲು ಯತ್ನಿಸಿದೆವಾದರೂ ಅವರು ನನ್ನ ಮೊಬೈಲ್ ಫೋನನ್ನು ಸೆಳೆದು ಚಿತ್ರಗಳನ್ನು ಡಿಲೀಟ್ ಮಾಡಿದರು. ದಿಲ್ಲಿ ಪೊಲೀಸರೂ ನಮ್ಮೊಂದಿಗೆ ಒರಟಾಗಿ ನಡೆದುಕೊಂಡರು ಎಂದು ಅವರು ದೂರಿದ್ದಾರೆ.
ದಿಲ್ಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ತಾನು ಇಂತಹ ಬೆದರಿಕೆಗಳನ್ನು ಅನುಮತಿಸುವುದಿಲ್ಲವೆಂದಿದ್ದಾರೆ. ದೆಹಲಿ ಉಪ ಪೊಲೀಸ್ ಆಯುಕ್ತ ಎ ಕೆ ಸಿಂಗ್ಲಾ ತಮಗೆ ಈ ಘಟನೆಯ ಬಗ್ಗೆ ತಿಳಿದಿಲ್ಲವೆಂದೂ ವಿಚಾರಿಸುವುದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News