ಸಂಸ್ಕೃತಿ, ಚಿಂತನೆಗಳ ಅನಾವರಣಕ್ಕೆ ಉಪಭಾಷೆ ಸಹಕಾರಿ: ಸಾಹಿತಿ ಡಾ. ನಾಗರಾಜಯ್ಯ

Update: 2016-05-24 17:09 GMT

ಮಡಿಕೇರಿ, ಮೇ 24: ಯಾವುದೇ ಒಂದು ಪ್ರದೇಶದ ಪ್ರಮುಖ ಭಾಷೆಯ ಮೂಲ ಸಂಸ್ಕೃತಿ ಮತ್ತು ಚಿಂತನೆಗಳನ್ನು ಕಂಡುಕೊಳ್ಳಲು ಅಲ್ಲಿನ ಉಪಭಾಷೆಗಳು ಸಹಕಾರಿಯಾಗುತ್ತದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಪಂಚ ಭಾಷಾ ಅಕಾಡಮಿಗಳ ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಂದು ಜನಾಂಗದ ನಾಗರಿಕತೆ ಮತ್ತು ಸಂಸ್ಕೃತಿಯ ಸಮಸ್ತ ಸಾರವನ್ನು ಹಿಡಿದಿಡುವಂತಹುದ್ದೇ ಭಾಷೆಯಾಗಿದ್ದು, ಇಂತಹ ಭಾಷೆಯಲ್ಲಿ ಮೇಲು ಕೀಳೆಂಬ ಭಾವನೆಗಳು ಸರಿಯಲ್ಲವೆಂದರು.

ಎಲ್ಲ ಭಾಷೆಗಳು ಶ್ರೇಷ್ಠವಾಗಿದ್ದು, ಕಲಿತು ಆಡುವ ಭಾಷೆ ಕೇವಲ ಕೊರಳಿನ ಭಾಷೆಯಾದರೆ, ನಮ್ಮ ಮಾತೃಭಾಷೆ ಎನ್ನುವುದು ಕರುಳಿನ ಭಾಷೆಯೇ ಆಗಿದೆ. ಕನ್ನಡದೊಂದಿಗೆ ಅರೆಭಾಷೆ, ಕೊಡವ, ಕೊಂಕಣಿ, ತುಳು, ಬ್ಯಾರಿ ಭಾಷೆಗಳನ್ನಾಡುವ ಮಂದಿ ಅದನ್ನು ಕೀಳೆಂದು ಭಾವಿಸುವ ಅಗತ್ಯವಿಲ್ಲ. ಇತರೆ ದೊಡ್ಡ ಭಾಷೆಗಳಷ್ಟೇ ಗೌರವ ಸ್ಥಾನಮಾನಗಳು ಈ ಭಾಷೆಗಳಿಗೂ ಇದೆ ಎಂದು ನಾಡೋಜ ಹೇಳಿದರು.

ಭಾಷೆ ಮತ್ತು ಸಂಸ್ಕೃತಿ ಎನ್ನುವುದು ದೇಹದ ಶ್ವಾಸವಿದ್ದಂತೆ. ಯಾವುದೇ ಸಮುದಾಯದ ಸಂಸ್ಕೃತಿ ಸಂರಕ್ಷಿಸಲ್ಪಡಬೇಕಾದರೆ ಅದರ ಭಾಷೆ ಉಳಿಯಬೇಕಾಗುತ್ತದೆ. ಭಾರತೀಯ ಸಂಸ್ಕೃತಿ ಎನ್ನುವುದು ಉಳಿದ ಸಂಸ್ಕೃತಿಗಳ ಮೇಲೆ ಸವಾರಿ ಮಾಡುವ ಸಂಸ್ಕೃತಿಯಲ್ಲ. ಬದಲಾಗಿ, ಅವೆಲ್ಲವುಗಳನ್ನು ಸಮಾನವಾಗಿ ಕಂಡುಕೊಂಡು ತನ್ನೊಂದಿಗೆ ಮುಂದಕ್ಕೆ ಕರೆದೊಯ್ಯುವ ಸಂಸ್ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಿ.ಎಂ.ನಾಗರಾಜ್ ಮಾತನಾಡಿ, ಪಂಚಭಾಷಾ ಸಾಹಿತ್ಯ ಅಕಾಡಮಿಗಳು ದಿಲ್ಲಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದಲ್ಲಿ ಅದಕ್ಕೆ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತೃ ಭಾಷಾ ಸಂಸ್ಕೃತಿಯ ಬೆಳವಣಿಗೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇರುವುದಾಗಿ ಹೆಮ್ಮೆ ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರೆಭಾಷಾ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಎಂ.ಎಂ. ಜಾನಕಿ ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News