ಇಂದು ಪಿಣರಾಯಿ ಸಚಿವ ಸಂಪುಟದ ಪ್ರಮಾಣವಚನ

Update: 2016-05-25 04:53 GMT

ತಿರುವನಂತಪುರಂ, ಮೇ 25: ಹೊಸ ನಿರೀಕ್ಷೆಗಳೊಂದಿಗೆ ಪಿಣರಾಯಿ ವಿಜಯನ್‌ರ ಎಡರಂಗದ ಸರಕಾರ ಇಂದು ಅಧಿಕಾರಕ್ಕೆ ಬರಲಿದೆ. ಅರ್ಧಲಕ್ಷಕ್ಕೂ ಹೆಚ್ಚಿರುವ ಪಕ್ಷದ ಕಾರ್ಯಕರ್ತರ, ನಾಯಕರ, ಸಾಂಸ್ಕೃತಿಕ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಸೆಕ್ರಟರಿಯೇಟ್‌ನ ಹಿಂದಿರುವ ಸೆಂಟ್ರಲ್ ಸ್ಟೇಡಿಯಂನಲ್ಲಿ ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲ ಪಿ.ಸದಾಶಿವಂ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಮುಖ್ಯಮಂತ್ರಿ ಸಹಿತ ಹತ್ತೊಂಬತ್ತು ಸಚಿವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಜೊತೆಯಲ್ಲಿ ಥಾಮಸ್ ಐಸಾಕ್, ಇಪಿ ಜಯರಾಜನ್, ಜಿ. ಸುಧಾಕರನ್,ಎಕೆ ಬಾಲನ್, ಜೆ.ಮೆರ್ಸಿಕುಟ್ಟಿಯಮ್ಮ,ಕಡಕಂ ಪಳ್ಳಿ ಸುರೇಂದ್ರನ್,ಕೆಕೆ ಶ್ಯೆಲಜಾ, ಟಿಪಿ ರಾಮಕೃಷ್ಣನ್, ಎಸಿ ಮೊಯ್ದಿನ್,ಫ್ರೊ.ಸಿ.ರವೀಂದ್ರನಾಥ್,ಡಾ. ಕೆಟಿ ಜಲೀಲ್(ಎಲ್ಲರೂ ಸಿಪಿಎಂ)ಇ.ಚಂದ್ರಶೇಖರನ್,ವಿಎಸ್ ಸುನೀಲ್‌ಕುಮಾರ್, ಕೆ.ರಾಜು, ಪಿ.ತಿಲೋತ್ತಮನ್(ಎಲ್ಲರೂ ಸಿಪಿಐ) ಮಾಥ್ಯೂ ಟಿ. ಥಾಮಸ್,(ಜೆಡಿಎಸ್). ಎಕೆ ಶಶೀಂದ್ರನ್(ಎನ್‌ಸಿಪಿ) ಕಡನ್ನಪ್ಪಳ್ಳಿ ರಾಮಚಂದ್ರನ್(ಕಾಂಗ್ರೆಸ್ ಎಸ್) ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.

ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸಲು ನಿಯೋಜಿತ ಕುಟುಂಬ ಸದಸ್ಯರೂ ಜನಪ್ರತಿನಿಧಿಗಳು ಎಡಪಕ್ಷಗಳ ಕಾರ್ಯಕರ್ತರೂ ರಾಜಧಾನಿಗೆ ಹರಿದು ಬರುತ್ತಿದ್ದಾರೆ. ವೇದಿಕೆಯಲ್ಲಿ ಮತ್ತು ಹೊರಗೆ ಸುಮಾರು 2000ಕ್ಕೂ ಅಧಿಕ ಪೊಲೀಸರನ್ನು ಸುರಕ್ಷೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ನೇಮಿಸಲಾಗಿದೆ. ಇಂದು ಬೆಳಗ್ಗೆ ಪಿಣರಾಯಿ ವಿಜಯನ್ ಸಚಿವರ ವಿವರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಮೂರುವರೆಗಂಟೆಗೆ ಪ್ರಮಾಣವಚನ ಸ್ವೀಕರಿಸುವ ವೇದಿಕೆಗೆ ಹೊಸ ಸಚಿವರು ಬರಲಿದ್ದಾರೆ. ಒಂದು ಗಂಟೆಯಷ್ಟು ಹೊತ್ತು ಸಮಾರಂಭ ಇರಲಿದೆ. ಕಾರ್ಯಕ್ರಮ ಮುಗಿದ ನಂತರ ರಾಜ್ಯಪಾಲರ ಭವನದಲ್ಲಿ ರಾಜ್ಯಪಾಲರು ನೀಡುವ ಚಾಕೂಟದಲ್ಲಿ ಸಚಿವರು ಭಾಗವಹಿಸಲಿದ್ದಾರೆ. ರಾತ್ರಿ ಏಳು ಗಂಟೆಗೆ ಮೊದಲ ಸಚಿವ ಸಂಪುಟ ಸಭೆ ಜರಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News