ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದ ತಮಿಳುನಾಡು ಶಾಸಕ ಸೀನಿವೇಲ್ ನಿಧನ

Update: 2016-05-25 05:24 GMT

ಮಧುರೈ, ಮೇ 25: ತಿರುಪರಾನ್‌ಕುಂದ್ರಮ್‌ ಕ್ಷೇತ್ರದ ಎಐಎಡಿಎಂಕೆ ಪಕ್ಷದ ನೂತನ  ಶಾಸಕ ಎಸ್.ಎಂ.ಸೀನಿವೆಲ್‌ ಅವರು ಮಧುರೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಬೆಳಗ್ಗೆ ನಿಧನರಾದರು. ಇಂದು  ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವುದು  ನಿಗದಿಯಾಗಿತ್ತು.
ಸೀನಿವೇಲ್ ಮೇ 18ರಂದು ಅಂದರೆ ಚುನಾವಣೆಯ ಮತ ಎಣಿಕೆಯ ಮುನ್ನಾದಿನ ಅಸೌಖ್ಯದ ಕಾರಣದಿಂದಾಗಿ ವಡಮಾಲಯನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚುನಾವಣೆಯಲ್ಲಿ ಮೊದಲ ಬಾರಿ ಜಯ ಗಳಿಸಿದ ಸೀನಿವೇಲ್ ಮೇ 23 ರಂದು ಮುಖ್ಯ ಮಂತ್ರಿ ಜೆ.ಜಯಲಲಿತಾ ಅವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಸೀನಿವೇಲ್‌ ಅವರು ವಿಧಾನಸಭೆಗೆ ಆಯ್ಕೆಯಾದ ಇತರ ಶಾಸಕರೊಂದಿಗೆ  ಬುಧವಾರ ಪ್ರಮಾಣ ವಚನ ಸ್ವೀಕರಿಸುವುದು ನಿಗದಿಯಾಗಿತ್ತು.  ಆದರೆ ಅವರು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 
ತೀವ್ರ ರಕ್ತದೊತ್ತಡದ ಪರಿಣಾಮವಾಗಿ ಆಘಾತಗೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಸೀನಿವೇಲ್ ಮೊಮ್ಮಗ ಎಸ್.ಗೋಪಿ ಮಾಹಿತಿ ನೀಡಿದ್ದಾರೆ.
65ರ ಹರೆಯದ  ಸೀನಿವೇಲ್ ಕಳೆದ ಚುನಾವಣೆಯಲ್ಲಿ ಡಿಎಂಕೆಯ ಮಣಿಮಾರನ್‌ ವಿರುದ್ಧ 22,992  ಮತಗಳ ಅಂತರದಿಂದ ಜಯ ಗಳಿಸಿದ್ದರು. ಸೀನಿವೇಲ್ ಅವರು ಪತ್ನಿ,  ಪುತ್ರ ಎಸ್.ಸೆಲ್ವ ಕುಮಾರ್‌ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News