ಮುಕ್ತ ಮುಕ್ತ ಮುಕ್ತ ಭಾರತ!
ಐದು ರಾಜ್ಯಗಳ ಚುನಾವಣಾ ಫಲಿತಾಂಶ ಒಂದು ರೀತಿಯಲ್ಲಿ ಸ್ವಾಗತಾರ್ಹವೇ. ಪಶ್ಚಿಮ ಬಂಗಾಳದಲ್ಲಿ ದೀದಿ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡಿನಲ್ಲಿ ‘ಅಮ್ಮ’ ಜಯಲಲಿತಾ ಮರು ಆಯ್ಕೆ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಕೇರಳದಲ್ಲಿ ಎಡದ ಬಲ ಇತರರನ್ನು ಸೋಲಿಸಿತು. ಅಸ್ಸಾಮಿನಲ್ಲಿ ಭಾಜಪ ಅಧಿಕಾರ ಹಿಡಿಯಿತು. ಪಾಂಡಿಚೇರಿಯಲ್ಲಿ ಕಾಂಗ್ರೆಸ್+ಡಿಎಂಕೆ ಮೈತ್ರಿ ಆಯ್ಕೆಯಾಯಿತು. ಇವು ಮಿಶ್ರ ಆಯ್ಕೆ ಎನ್ನುವಂತಿಲ್ಲ.
ಜನರು ಬದಲಾವಣೆಯನ್ನು ಬಯಸಿದರು; ಆದರೆ ಬದಲಾವಣೆಗಾಗಿ ಬದಲಾವಣೆಯಲ್ಲ ಎಂಬುದನ್ನೂ ಸಾಬೀತುಪಡಿಸಿದರು. ಜೊತೆಗೆ ರಾಷ್ಟ್ರದ ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿದರು. ಹಾಗೆಯೇ ಪ್ರಧಾನಿ ಬಂದದ್ದರಿಂದ ಅಸ್ಸಾಮ್ ಭಾಜಪದ ಕೈಹಿಡಿಯಿತು ಎನ್ನುವಂತಿಲ್ಲ; ಇವಕ್ಕೆಲ್ಲ ಅಂತರ್ಜಲದ ರೀತಿಯಲ್ಲಿ ಹರಿದ ಮನಸ್ಥಿತಿ ಕಾರಣ. ಏಕೆಂದರೆ ಪ್ರಧಾನಿ ಅಸ್ಸಾಮಿಗೆ ಮಾತ್ರ ಹೋದದ್ದಲ್ಲ. ಚುನಾವಣೆಯಿದ್ದ ಎಲ್ಲ ರಾಜ್ಯಗಳಿಗೂ ಭೇಟಿ ನೀಡಿದ್ದರು. ಈ ಎರಡು ವರ್ಷಗಳಲ್ಲಿ ಅತೀವ ನಷ್ಟವನ್ನು ಅನುಭವಿಸುತ್ತಿರುವುದು ಕಾಂಗ್ರೆಸ್. ಕಾಂಗ್ರೆಸ್‌ನ ದುಃಸ್ಥಿತಿ ಅದರದ್ದೇ ನಿರ್ಮಾಣವಾದ್ದರಿಂದ ಇತರ ಯಾರೂ ಈ ಬಗ್ಗೆ ಬೆನ್ನು ತಟ್ಟಿಕೊಳ್ಳಬೇಕಾಗಿಲ್ಲ. ಕಾಂಗ್ರೆಸ್ ಸೋತಲ್ಲೆಲ್ಲ- ಅಸ್ಸಾಮಿನ ಹೊರತಾಗಿ ಇತರೆಡೆ-ಭಾಜಪ ಆಯ್ಕೆಯಾಗಿಲ್ಲ ವೆನ್ನುವುದು ಗಮನಾರ್ಹ. ಆದ್ದರಿಂದ ಕಾಂಗ್ರೆಸಿಗೆ ಪರ್ಯಾಯವಾಗಿ ಭಾಜಪ ಒಂದೇ ದೇಶದ ಆಯ್ಕೆಯೆಂದು ಬಣ್ಣಿಸಲಾಗದು. ಜನ ತಮಗೆ ಎಲ್ಲಿ ಯಾವುದು ಹಿತ ಎಂದು ತೀರ್ಮಾನಿಸಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಬೇಡವೆಂದು ಅಭಿಪ್ರಾಯ ಬಂದಂತಿದೆ. ಆದರೆ ಅಮಿತ್ ಶಾ, ಅರುಣ್ ಜೇಟ್ಲಿಯಾದಿಯಾಗಿ ಭಾಜಪ ನಾಯಕರು ತಮ್ಮ ಸೋಲು-ಗೆಲುವಿನ ಬಗ್ಗೆ ಪರಾಮರ್ಶೆ ಮಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕಾರಣವೆಂದು ಟೀಕಿಸುತ್ತಿದ್ದಾರೆ.
ಇದು ಕಾಂಗ್ರೆಸಿಗೆ ನಿಜಕ್ಕೂ ನೈತಿಕ ಸ್ಥೈರ್ಯ ನೀಡಬೇಕು. ಏಕೆಂದರೆ- ಕುಟುಂಬ ರಾಜಕಾರಣ ಎಲ್ಲ ಪಕ್ಷ ಗಳಲ್ಲೂ ಇದೆ. ಐದೋ ಆರೋ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿರುವ ಒಂದು ಪಕ್ಷದ ಬಗ್ಗೆ ಭಾಜಪ ಮಾಡುತ್ತಿರುವ ಟೀಕೆ, ನೀಡುತ್ತಿರುವ ಹೇಳಿಕೆ ಇವನ್ನು ಗಮನಿಸಿದರೆ ಭಾಜಪ ಇನ್ನೂ ಕಾಂಗ್ರೆಸ್ ಒಂದನ್ನೇ ತನ್ನ ಎದುರಾಳಿಯೆಂದು ತಿಳಿದಂತಿದೆ. ಇದೇ ಭ್ರಮೆಯಿಂದಾಗಿ ಭಾಜಪವು ಬಿಹಾರದಲ್ಲಿ ಸೋಲನ್ನು ಅನುಭವಿಸಿ ನಿತೀಶ್ ಮತ್ತು ಲಾಲೂ ಸರಕಾರ ಆಯ್ಕೆಯಾಯಿತು; ದಿಲ್ಲಿಯಲ್ಲಿ ಕೇಂದ್ರದ ಮೂಗಿನಡಿ ಕೇಜ್ರಿವಾಲ್ ಗದ್ದುಗೆ ಹಿಡಿದರು. ಅದೀಗ ಈ ಚುನಾವಣೆಗಳಲ್ಲೂ ಸ್ಪಷ್ಟವಾಗಿದೆ. ಇದಕ್ಕೂ ಮೇಲಾಗಿ ಮೋದಿಯಿಂದ ಮೊದಲ್ಗೊಂಡು ಎಲ್ಲ ಭಾಜಪ ನೇತಾರರೂ ಮತ್ತು ಸ್ವಲ್ಪಮಟ್ಟಿಗೆ ಮಾಧ್ಯಮಗಳೂ ಕಾಂಗ್ರೆಸ್ ಮುಕ್ತ ಭಾರತದೆಡೆಗೆ ಈ ಫಲಿತಾಂಶಗಳು ದಿಕ್ಸೂಚಿಯೆಂದು ಹೇಳಿದವು. ಪರೋಕ್ಷವಾಗಿ ಇದನ್ನು ಸಮರ್ಥಿಸುವಂತೆಯೋ ಎಂಬಂತೆ ದಿಗ್ವಿಜಯ ಸಿಂಗ್, ವೀರಪ್ಪಮೊಯ್ಲಿ ಮುಂತಾದ ಕಾಂಗ್ರೆಸ್ ಧುರೀಣರು (ಕಾಂಗ್ರೆಸ್ ಕ್ಷೀಣವಾಗುವುದಕ್ಕೆ ಈ ನಾಯಕರ ಕೊಡುಗೆಯೂ ಸಾಕಷ್ಟಿದೆ!) ಪಕ್ಷಕ್ಕೆ ಮೇಜರ್ ಸರ್ಜರಿಯಾಗಬೇಕೆಂದು, ಯುವಕರಿಗೆ ನಾಯಕತ್ವ ನೀಡಬೇಕೆಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ತಮ್ಮ ಪಕ್ಷದವರಿಗೆ ನೈತಿಕ ಸ್ಥೈರ್ಯ ತುಂಬಲಾರಂಭಿಸಿದ್ದಾರೆ. ಸೋಲು ಶಾಶ್ವತವಲ್ಲ, ಮತ್ತು ತತ್ವರಹಿತ ಗೆಲುವು ತಾತ್ಕಾಲಿಕ ಎಂಬ ಪ್ರಮೇಯದೊಂದಿಗೆ ಕಾಂಗ್ರೆಸನ್ನು ವರ್ಧಿಸಲು ಕರೆ ನೀಡಿದರು. ರಾಹುಲ್ ಗಾಂಧಿ ಪಕ್ಷವನ್ನಾಗಲೀ ಜನತೆಯನ್ನಾಗಲೀ ಆಕರ್ಷಿಸಲಾರರು ಎಂಬುದು ಕಾಂಗ್ರೆಸಿಗೆ ಗೊತ್ತಾದಂತಿದ್ದರೂ ಅದರ ಅನೇಕ ಹಿರಿಯರಿಗೆ ಹಾಗೆ ಹೇಳುವ ಧೈರ್ಯವಿಲ್ಲದೆ (ಪ್ರಾಯಃ ಸೋನಿಯಾರಿಗೆ ಹೆದರಿ ಮತ್ತು ಸೋನಿಯಾ ಸುತ್ತ ಇರುವ ಮಂದಿಯ ಕಿವಿಕಿಲುಬಿಗೆ ಬಲಿಯಾಗುವ ಭಯದಲ್ಲಿ) ಸುಮ್ಮನಿದ್ದಾರೆ. ರಾಜಕೀಯ ಪಕ್ಷವೊಂದರ ನಡೆಗಳು ಇವಾದ್ದರಿಂದ ಯಾವಾಗ ಬೇಕಾದರೂ ನಡೆ-ನುಡಿಗಳು ಬದಲಾಗಬಹುದು. ಒಂದಂಶವಂತೂ ಎಲ್ಲರೂ ಒಪ್ಪಬೇಕು: ಕಾಂಗ್ರೆಸ್ ಆಡಳಿತವಿರುವಾಗ ಎಡಪಕ್ಷಗಳು, ಸಮಾಜವಾದೀ ಪಕ್ಷಗಳು, ಜನಸಂಘ, ಹೀಗೆ ಎಲ್ಲಕಡೆ ಅಷ್ಟೋ ಇಷ್ಟೋ ಬೆಂಬಲವಿದ್ದ ಮತ್ತು ರಾಷ್ಟ್ರೀಯವಾಗಿ ಕಾಂಗ್ರೆಸನ್ನು ವಿರೋಧಿಸಬಲ್ಲ ಅನೇಕ ಪಕ್ಷಗಳಿದ್ದವು. ಇವೆಲ್ಲ ಒಟ್ಟು ಸೇರಿದರೆ ಏನಾಗಬಹುದೆಂದು 1977ರ ಚುನಾವಣೆ ತೀರ್ಪು ಕೊಟ್ಟಿತು. ಆದರೆ ಈಗ ಭಾಜಪ ಇನ್ನೂ ಎಲ್ಲ ರಾಜ್ಯಗಳಲ್ಲಿ ಕಾಲೂರದಿದ್ದರೂ ಒಂದು ರಾಷ್ಟ್ರೀಯ ಪಕ್ಷವಾಗಿದೆ.
ಈ ವಿಕಾಸಕ್ಕೆ ಒಳ್ಳೆಯ-ಕೆಟ್ಟ ಕಾರಣಗಳೇನೇ ಇದ್ದರೂ ಉಳಿದ ವಿರೋಧ ಪಕ್ಷಗಳು ಈ ಪರಿಯ ಬೆಳವಣಿಗೆಯನ್ನು ಸಾಧಿಸಿಲ್ಲ. ಇದರಿಂದಾಗಿ ಒಟ್ಟಾರೆ ದೇಶದ ರಾಜಕೀಯವನ್ನು ವಿಶ್ಲೇಷಿಸಿದರೆ, ಭಾಜಪಕ್ಕೆ ಪರ್ಯಾಯವಾದ ಮತ್ತು ಬದಲಾವಣೆಗಾಗಿ ಜನರು ನೋಡಬಲ್ಲ ವಿರೋಧ ಪಕ್ಷವೆಂದರೆ ಕಾಂಗ್ರೆಸ್ ಒಂದೇ. ಈ ಅಂಶ ಕಾಂಗ್ರೆಸಿಗೆ ಗೊತ್ತಿದೆಯೋ ಇಲ್ಲವೋ ಭಾಜಪಕ್ಕಂತೂ ಗೊತ್ತಿದೆ. ಅದಕ್ಕಾಗಿಯೇ ಅದು ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳದಂತಹ ಪೂರ್ಣ ಪ್ರಮಾಣದ ರಾಜ್ಯಗಳಲ್ಲಿ ಮತ್ತು ದಿಲ್ಲಿ, ಪಾಂಡಿಚೇರಿಯಂತಹ ಪುಟ್ಟ ಕೇಂದ್ರಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ಕನಸು ಕಾಣುತ್ತಿರುವುದು ಕಾಂಗ್ರೆಸ್ ಮುಕ್ತ ಭಾರತ ಮಾತ್ರ. ಆ ಮೂಲಕ ಅದು ಭಾರತವನ್ನು ಒಂದು ಮುಕ್ತಿಧಾಮವನ್ನಾಗಿ ಮಾಡಲು ಹಾತೊರೆಯುತ್ತಿದೆ. ಮುಕ್ತಿಯೆನ್ನುವುದು ಪರಂಧಾಮದ ಸ್ಥಿತಿ. ಎಲ್ಲವನ್ನೂ ಕಳೆದುಕೊಂಡ ಆದರೂ ಎಲ್ಲವನ್ನೂ ಒಳಗೊಂಡ ಜೀವನ್ಮುಕ್ತ ಸ್ಥಿತಿ. ಅದಕ್ಕೊಂದು ಶಾಂತ ಪರಿಸರದ, ಮನೋಧರ್ಮದ ಲಕ್ಷಣವಿದೆ. ಅದನ್ನು ಯಾವ ಸಿದ್ಧಾಂತಕ್ಕೂ ಒಲಿಯದ, ಬಾಗದ, ಬಗ್ಗದ ದೇಶದ ಕೊಳಕು/ಹುಳುಕು ರಾಜಕೀಯಕ್ಕೆ ಬಳಸುವುದು ಸರಿಯಲ್ಲ. ಆದರೂ ಸೇಡಿಗೋ, ಅಹಂಕಾರದ ಸಂಕೇತವಾಗಿಯೋ, ಜನರನ್ನು ಮರುಳು ಮಾಡುವುದಕ್ಕಾಗಿಯೋ ಈ ಪದ ರಾಜಕೀಯದಲ್ಲಿ ಬಳಸಲ್ಪಡುವುದು ವಿಷಾದನೀಯ. ಆದರೂ ಸದ್ಯ ಈ ಮುಕ್ತ ಎಂಬ ಪದವು ಮುಕ್ತವಾಗಿ/ಬೇಕಾಬಿಟ್ಟಿ ಬಳಸಲ್ಪಡುವಾಗ ಅದರ ತಪ್ಪುಕಲ್ಪನೆಗಳನ್ನು ಅಲ್ಲಗಳೆಯುವುದು, ನಿವಾರಿಸುವುದು ಕಾಲ-ದೇಶದ ಚಿಂತನಾತ್ಮಕ ಅಗತ್ಯವಾಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಎಂಬ ಕಲ್ಪನೆ, ಸಿದ್ದಾಂತವು ನೇತ್ಯಾತ್ಮಕವಾದದ್ದು. ಪಕ್ಷಗಳು ತಮ್ಮಷ್ಟಕ್ಕೆ ತಾವು ಬೇರೆ ಬೇರೆ ಕಾರಣಗಳಿಗಾಗಿ ಅಳಿಯಬಹುದು; ನಾಮಾವಶೇಷವಾಗಬಹುದು. ಉದಾಹರಣೆಗೆ ಜನಸಂಘ, ಸ್ವತಂತ್ರ ಮುಂತಾದ ವಿರೋಧ ಪಕ್ಷಗಳು ಈಗ ಅಸ್ತಿತ್ವದಲ್ಲಿಲ್ಲ. ಅವುಗಳಿಂದ ಭಾರತವನ್ನು ಮುಕ್ತ ಮಾಡಿದೆವೆಂದು ಯಾರು ಹೇಳುವ ಹಾಗಿಲ್ಲ; ಹೇಳಲೂಬಾರದು.
ಅನೇಕ ಒಳ್ಳೆಯ, ಕೆಟ್ಟ ರಾಜಕಾರಣಿಗಳು ಈಗಿಲ್ಲ. ಅವರಿಂದ ಭಾರತ ಮುಕ್ತವಾಯಿತೆಂಬ ಭಾವವು ಉತ್ಪನ್ನವಾಗಬಾರದು. ಇಂತಹ ವಿನಾಶಕಾರಿ ಯೋಚನೆಗಳು ಭಗವಂತನಿಗೂ ಬರಲಿಲ್ಲ. ಒಳ್ಳೆಯದಾಗಲೀ ಕೆಟ್ಟದ್ದಾಗಲೀ-ಯಾವುದೂ ಶಾಶ್ವತವಲ್ಲ; ಇಲ್ಲವಾದರೆ ಒಮ್ಮೆಲೇ ಧರ್ಮವು ಶಾಶ್ವತವಾಗಿ ಸ್ಥಾಪಿಸಲ್ಪಡುತ್ತಿತ್ತು. ಅದಕ್ಕೇ ಸರ್ವಶಕ್ತ ಭಗವಂತನೆಂಬ ಪಾತ್ರದ ಬಾಯಲ್ಲೂ ‘‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ’’ ಎಂಬ ಮಾತುಗಳನ್ನು ವ್ಯಾಸಕವಿ ನುಡಿಸಿದ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುತ್ತೇವೆ ನ್ನುವುದು ಅಹಂಕಾರದ ಮಾತು ಮಾತ್ರವಲ್ಲ, ರಾಕ್ಷಸೀಯವಾದ ಘೋಷಣೆ. ವಿವೇಕವಿರುವ, ಚರಿತ್ರೆಯನ್ನು ನೆನಪಿಡುವ ಯಾರೂ ಇಂತಹ ಮಾತುಗಳನ್ನು ಹೇಳುವುದಿಲ್ಲ. ಸ್ವಾತಂತ್ರ್ಯೋತ್ತರ ಒಂದೆರಡು ಉದಾಹರಣೆಗಳನ್ನು ಹೇಳುವುದಾದರೆ- ಒಂದು ಕಾಲದಲ್ಲಿ ಲೋಕಸಭೆೆ ಯಲ್ಲಿ 83 ಸ್ಥಾನಗಳನ್ನು ಹೊಂದಿದ್ದ ಭಾಜಪವು ಅನಂತರದ ಚುನಾವಣೆಯಲ್ಲಿ 2 ಸ್ಥಾನಗಳನ್ನಷ್ಟೇ ಪಡೆಯಿತು. ಕಾಂಗ್ರೆಸ್ ಪಕ್ಷವು 1978ರಲ್ಲಿ 2 ರಾಜ್ಯಗಳಲ್ಲಿ ಮಾತ್ರ (ಕರ್ನಾಟಕ ಮತ್ತು ಆಂದ್ರಪ್ರದೇಶ) ಆಡಳಿತದಲ್ಲಿತ್ತು. ರಾಜಕೀಯದಲ್ಲಿ ಏಳುಬೀಳುಗಳು ಸಹಜವಾಗಿರುವಾಗ ಪ್ರಧಾನಿಯಾದಿಯಾಗಿ ಆಡಳಿತಸೂತ್ರ ಹಿಡಿದ ರಾಜಕಾರಣಿಗಳು ಮುಕ್ತಿಯ ಮಾತುಗಳನ್ನಾಡಬಾರದು. ಉನ್ನತ ಸ್ಥಾನಕ್ಕೇರಿದವರಿಗೆ ಬಿದ್ದಾಗ ಹೆಚ್ಚು ಘಾಸಿಯಾಗುತ್ತದೆ. ಆದರೆ ರಥಯಾತ್ರೆಯಂತೆ ಸಾಗುವ ಕಾಲದಡಿ ನುಜ್ಜುಗುಜ್ಜುಗಳು ಮುಖ್ಯವೆನಿಸುವುದಿಲ್ಲ. ಇದಿಷ್ಟೇ ಅಲ್ಲ: ಪ್ರಜಾತಂತ್ರಕ್ಕೆ ಪ್ರಬಲವಾದ ವಿರೋಧ/ಪ್ರತಿಪಕ್ಷಗಳ ಅಗತ್ಯವಿದೆ. ಅವಿಲ್ಲದಿದ್ದರೆ ಎಂತಹ ಒಳ್ಳೆಯ ಆಡಳಿತಗಾರನೂ ಸರ್ವಾ ಧಿಕಾರಿಯಾಗುವ ಅಸೆ, ಆಮಿಷ, ಆಕಾಂಕ್ಷೆಗಳಿಗೆ ತುತ್ತಾಗುತ್ತಾನೆ. ಪ್ರಜಾತಂತ್ರದಲ್ಲಿ ಸಂಸದೀಯ ಸರಕಾರವನ್ನು ಹೊಂದಿದ ಭಾರತದಲ್ಲಿ ಪ್ರತಿಪಕ್ಷಗಳೇ ಜನರ ವಕ್ತಾರರು. ಇದರಿಂದಾಗಿ ಪ್ರತಿಪಕ್ಷಗಳ ಹೊಣೆ ಹೆಚ್ಚಾಗಿದೆ. ಅವಿರುವುದರಿಂದಲೇ ಸರಕಾರವು ಇಚ್ಛಿಸಿದಷ್ಟು ತಪ್ಪುಹೆಜ್ಜೆಗಳನ್ನಿ ಡಲಾಗುವುದಿಲ್ಲ. (ನೆಹರೂ ಕಾಲದಿಂದಲೂ ಸರಕಾರವು ಶಕ್ತ ಪ್ರತಿಪಕ್ಷಗಳನ್ನು ನಿರ್ನಾಮಮಾಡಲು ಯತ್ನಿಸಿದ್ದಕ್ಕೆ ಇದೂ ಒಂದು ಕಾರಣವಾಗಿದೆ.) ಈ ಕಾರ್ಯವು ಸುಲಭಸಾಧ್ಯವಲ್ಲವೆಂಬುದು ಸಂಸದೀಯ ಪ್ರಜಾಸತ್ತೆಯ ವಾಸ್ತವವಾದಿಗಳಿಗೆ ಗೊತ್ತಿರುತ್ತದೆ. ಪ್ರತಿಪಕ್ಷಮುಕ್ತ ಭಾರತವೆಂಬುದು ಚುನಾವಣೆಯಲ್ಲಿರಲಿ; ಚುನಾವಣೆಯ ನಂತರ ದೂರವಿರಲಿ. ಅದು ಘನತೆಯ ವರ್ತನೆ. ಸಾಂದರ್ಭಿಕವಾಗಿ ವಿರೋಧಪಕ್ಷಗಳ ನಾಯಕ ಸ್ಥಾನವೂ ಗುರುತರವಾಗುತ್ತದೆ. ಸಂಸದಿನ ನಿಯಮಾನುಸಾರ ಒಟ್ಟು ಸ್ಥಾನಗಳ ಶೇಕಡಾ 10ರಷ್ಟು ಸ್ಥಾನ ಹೊಂದಿಲ್ಲದಿದ್ದರೆ ಪ್ರತಿಪಕ್ಷ ಸ್ಥಾನಮಾನ ಸಿಗುವುದಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಭಾಜಪ ಹೊರತಾಗಿ ಯಾವ ಪಕ್ಷಕ್ಕೂ ಈ ಅರ್ಹತೆ ಸಿಗಲಿಲ್ಲ. ಆದರೂ ನಿಯಮಗಳಿರುವುದು ಸಮಾಜದ ಮತ್ತು ವ್ಯವಸ್ಥೆಯ ಅಗತ್ಯಗಳಿಗೇ ಹೊರತು ಪೀಠಭದ್ರರಾಗುವುದಕ್ಕಲ್ಲ ಮತ್ತು ಇದು ಕಾನೂನಿನ ತೊಡಕಲ್ಲ ಎಂಬುದನ್ನು ಆಳುವವರು ಅರ್ಥಮಾಡಿ ಕೊಳ್ಳಬೇಕು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ (ಎಂದು ಕಾಣಿಸುತ್ತದೆ) ಲೋಕಸಭೆೆಯ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರವು ಪರಂಪರೆಯನ್ನು ತನ್ನ ಘನತೆಯನ್ನು ಎತ್ತಿಹಿಡಿದು ಅತೀ ಹೆಚ್ಚು ಸ್ಥಾನ ಗಳಿಸಿದ ಪಕ್ಷಕ್ಕೆ ಈ ಸ್ಥಾನಮಾನವನ್ನು ಕಲ್ಪಿಸಬಹುದಿತ್ತು. ದುರದೃಷ್ಟವಶಾತ್ ಸರಕಾರವು ಈ ಗುಣಮಟ್ಟದಿಂದ ಕೆಳಸರಿಯಿತು.
ನಿಯಮಗಳನ್ನು ಉಲ್ಲೇಖಿಸಿ ನುಣುಚಿಕೊಂಡಿತು. ದಿಲ್ಲಿ ವಿಧಾನಸಭೆೆಯಲ್ಲಿ ಇದಕ್ಕಿಂತಲೂ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿತ್ತು. 60 ಶಾಸಕರ ಪೈಕಿ ಎಎಪಿ 57 ಸ್ಥಾನಗಳನ್ನು ಗಳಿಸಿದರೆ ಭಾಜಪವು ಕೇವಲ 3 ಸ್ಥಾನಗಳನ್ನು ಗಳಿಸಿತು. ಆದರೂ ಭಾಜಪವನ್ನು ಪ್ರತಿಪಕ್ಷವಾಗಿ ಗುರುತಿಸಿ ಅದರ ನಾಯಕನಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿ ಎಎಪಿ ತನ್ನ ಘನತೆಯನ್ನು ಮತ್ತು ಪ್ರಜಾತಂತ್ರದ ವೌಲ್ಯ-ಪರಂಪರೆಯನ್ನು ಎತ್ತಿ ಹಿಡಿಯಿತು. ಈ ಭಾರತೀಯ ಔದಾರ್ಯ ಭಾಜಪಕ್ಕೆ ಬರಲೇ ಇಲ್ಲ. ಇತಿಹಾಸಕ್ಕೆ ಮನುಷ್ಯರ ಆಯುಷ್ಯಕ್ಕಿಂತ ಹೆಚ್ಚು ಕಾಲಾವಧಿಯಿದೆ. ಆದ್ದರಿಂದ ಎಲ್ಲವನ್ನೂ ನಾವೇ ಮಾಡಿ ತೀರಿಸುತ್ತೇವೆಂದು ಭಾವಿಸುವುದು ಅಪಕ್ವ ಗ್ರಹಿಕೆ. ನಾವು ಪರಂಪರೆಯ ಒಂದು ಭಾಗ ಮಾತ್ರ. ಹೊಸ ಆವಿಷ್ಕಾರಗಳು, ಪ್ರಯೋಗಗಳು ಈ ಪರಂಪರೆಯನ್ನು ಮುಂದುವರಿಸಬೇಕು ಮತ್ತು ಬೆಳೆಸಬೇಕು. ಆದ್ದರಿಂದ ಯಾರನ್ನೂ ಯಾವುದನ್ನೂ ಯಾರಿಂದಲೂ ಮುಕ್ತ ಮಾಡುತ್ತೇವೆಂದು ಹೇಳುವ ಮೊದಲು ತಾವೇನು ಮಾಡುತ್ತಿದ್ದೇವೆ, ಮಾತನಾಡುತ್ತಿದ್ದೇವೆ ಎಂಬುದರ ಅರಿವಿದ್ದರೆ ಕ್ಷೇಮ. ಆದ್ದರಿಂದ ಭಾರತವನ್ನು ಕಾಂಗ್ರೆಸ್‌ಮುಕ್ತ ಮಾಡುತ್ತೇವೆಂದು ಕೊಚ್ಚಿಕೊಳ್ಳುವುದರ ಬದಲು ಭ್ರಷ್ಟಮುಕ್ತ, ಕಷ್ಟಮುಕ್ತ, ರೋಗಮುಕ್ತ, ವೌಢ್ಯಮುಕ್ತ ಗೊಳಿಸುತ್ತೇವೆಂದು ಹೇಳುವುದು ಸಾರ್ವಕಾಲಿಕ ಅಗತ್ಯ.