ಬಹಿರಂಗ ಮೂತ್ರ-ಉಗುಳಿದರೆ ದಂಡ

Update: 2016-05-25 18:17 GMT

ಹೊಸದಿಲ್ಲಿ, ಮೇ 25: ತೆರೆದ ಬಯಲಲ್ಲಿ ಮೂತ್ರ ವಿಸರ್ಜಸುವುದು ಹಾಗೂ ಸರಕಾರಿ ಕಚೇರಿಗಳ ಆವರಣದಲ್ಲಿ ಉಗುಳುವುದು ಇನ್ನು ದಂಡ ತೆರಲು ಕಾರಣಗಳಾಗಲಿವೆ. ಸ್ವಚ್ಛ, ಶುಚಿ ಹಾಗೂ ಆರೋಗ್ಯಪೂರ್ಣ ಕೆಲಸದ ವಾತಾವರಣವನ್ನು ಖಚಿತಪಡಿಸಲು ಕೇಂದ್ರ ಸರಕಾರವು ‘ಸ್ವಚ್ಛ ಭಾರತ ಅಭಿಯಾನಕ್ಕಾಗಿ’ ಹೊಸ ಮಾದರಿ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ಹೊರಡಿಸಿದೆ.

ಗುತ್ತಿಗೆದಾರರು ನಿರ್ಮಾಣ ಹಾಗೂ ಕಟ್ಟಡ ಧ್ವಂಸದ ತ್ಯಾಜ್ಯವನ್ನು ಸಂಗ್ರಹಿಸಿ ತೆರವುಗೊಳಿಸದಿದಲ್ಲಿ ಅದಕ್ಕೂ ದಂಡ ವಿಧಿಸಲಾಗುವುದು.
ಈ ಎಸ್‌ಒಪಿಗಳನ್ನು ಇತ್ತೀಚೆಗೆ ಕೇಂದ್ರದ ಎಲ್ಲ ಸಚಿವಾಲಯಗಳೊಂದಿಗೆ ಹಂಚಿಕೊಳ್ಳಲಾಗಿದ್ದು. ಕಚೇರಿಯ ಆವರಣದಲ್ಲಿ ಸಂಪೂರ್ಣ ಶುಚಿತ್ವವನ್ನು ಖಚಿತಪಡಿಸಲು ಈ ಹೊಸ ಪ್ರಕ್ರಿಯೆಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆಯೆಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರನ್ವಯ, ಪ್ರತಿ ಇಲಾಖೆಯೂ ಎಸ್‌ಒಪಿಗಳ ಅನುಷ್ಠಾನದ ಮೇಲೆ ನಿಗಾ ಇರಿಸಲು ಆಡಳಿತದ ಪ್ರಭಾರ ಪಡೆದಿರುವ ಜಂಟಿ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಸ್ವಚ್ಛತಾ ಸಮಿತಿಯೊಂದನ್ನು ರಚಿಸಬೇಕು. ಉಗುಳುವವರಿಗೆ, ಸಾರ್ವಜನಿಕವಾಗಿ ಮೂತ್ರ ವಿಸರ್ಜಸುವವರಿಗೆ ದಂಡವನ್ನು ವಿಧಿಸುವ ಹಾಗೂ ಕಚೇರಿಯ ಆವರಣದಲ್ಲಿ ಹಠಾತ್ ತಪಾಸಣೆ ನಡೆಸಿ ಸ್ವಚ್ಛ, ಶುಚಿ ಹಾಗೂ ಆರೋಗ್ಯಪೂರ್ಣ ಕೆಲಸದ ವಾತಾವರಣವನ್ನು ಖಚಿತಪಡಿಸುವುದು ಸಂಬಂಧಿತ ಅಧಿಕಾರಿಯ ಹೊಣೆಯಾಗಿದೆ.
ನಿರ್ಮಾಣ ಹಾಗೂ ತೆರವಿನ ತ್ಯಾಜ್ಯವನ್ನು ಸಂಗ್ರಹಿಸುವ ಹೊಣೆ ಗುತ್ತಿಗೆದಾರರದಾಗಿದ್ದರೆ, ಅವರು ಕೆಲಸ ಮುಗಿದೊಡನೆ ತಕ್ಷಣ ಅದನ್ನು ಮಾಡಬೇಕು. ಅದನ್ನು ಮಾಡದಿದ್ದಲ್ಲಿ ದಂಡ ತೆರಬೇಕಾಗುತ್ತದೆಂದು ಎಲ್ಲ ಕೇಂದ್ರ ಸಚಿವಾಲಯಗಳ ಕಾರ್ಯಾಲಯಗಳಿಗೆ ಕಳುಹಿಸಲಾಗಿರುವ ಎಸ್‌ಒಪಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News