ಯುಡಿಎಫ್‌ಗೆ ಸಂಕಟ ಶುರು

Update: 2016-05-26 03:22 GMT

ತಿರುವನಂತಪುರ, ಮೇ 26: ಹಿಂದಿನ ಸರಕಾರದ ಎಲ್ಲ ವಿವಾದಾತ್ಮಕ ನಿರ್ಧಾರಗಳ ಪರಿಶೀಲನೆಗೆ ಕೇರಳದ ನೂತನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ನೀಡುವ ಮೂಲಕ ಹಿಂದಿನ ಯುಡಿಎಫ್ ಸರಕಾರದ ಸಂಕಷ್ಟ ಆರಂಭವಾಗಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಜಯನ್ ತೆಗೆದುಕೊಂಡ ಮೊಟ್ಟಮೊದಲ ನಿರ್ಧಾರ ಇದಾಗಿದ್ದು, ಈ ವರ್ಷದ ಜನವರಿ 1ರಿಂದ ತೆಗೆದುಕೊಂಡ ಎಲ್ಲ ನಿರ್ಧಾರಗಳ ಪುನರ್ ಪರಿಶೀಲನೆಗೆ ನಿರ್ಧರಿಸಿರುವುದರಿಂದ ಹೊಸ ಆಡಳಿತ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ದುರಾಡಳಿತ ವಿರುದ್ಧದ ಸಮರ ಸಾರುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಇದು ಎಲ್‌ಡಿಎಫ್‌ನ ಮುಖ್ಯ ಚುನಾವಣಾ ಪ್ರಣಾಳಿಕೆಯಾಗಿತ್ತು.
ಪಿಣರಾಯಿ ವಿಜಯನ್ ಹಾಗೂ ಸಂಪುಟದ 18 ಮಂದಿ ಸಚಿವರು ರಾಜ್ಯಪಾಲ ಸತ್ಯಶಿವಂ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಸಾವಿರಾರು ಮಂದಿ ಎಲ್‌ಡಿಎಫ್ ಬೆಂಬಗಲಿರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ, ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್, ಉಮ್ಮನ್ ಚಾಂಡಿ ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಂಡಿದ್ದರು.
ಸಮಾರಂಭದ ಬಳಿಕ ರಾಜಭವನದಲ್ಲಿ ಚಹಾಕೂಟ ಏರ್ಪಡಿಸಲಾಗಿತ್ತು. ಬಳಿಕ ನೂತನ ಸಂಪುಟ ಸಭೆ ಸೇರಿತು. ಎ.ಕೆ.ಬಾಲನ್ ಅವರ ನೇತೃತ್ವದಲ್ಲಿ ಉಪಸಮಿತಿ ರಚಿಸಿ ಹಿಂದಿನ ಸರ್ಕಾರದ ಎಲ್ಲ ಸಮಸ್ಯಾತ್ಮಕ ಹಾಗೂ ವಿವಾದಾತ್ಮಕ ನಿರ್ಧಾರಗಳ ಪುನರ್ ಪರಿಶೀಲನೆಗೆ ಸೂಚಿಸಲಾಗಿದೆ. ಆದಷ್ಟು ಶೀಘ್ರವಾಗಿ ವರದಿ ನೀಡುವಂತೆ ಉಪಸಮಿತಿಗೆ ಸೂಚಿಸಲಾಗಿದೆ ಎಂದು ವಿಜಯನ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News