ಆರ್‌ಬಿಐ ಗವರ್ನರ್ ವಿರುದ್ಧ ದಾಳಿಯನ್ನು ಒಪ್ಪುವುದಿಲ್ಲ:ಜೇಟ್ಲಿ

Update: 2016-05-26 14:20 GMT

ಹೊಸದಿಲ್ಲಿ,ಮೇ 26: ಆರ್‌ಬಿಐ ಗವರ್ನರ್ ರಘುರಾಮ ರಾಜನ್ ವಿರುದ್ಧ ದಾಳಿಯನ್ನು ತಾನು ಒಪ್ಪುವುದಿಲ್ಲ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ. ರಾಜನ್ ಅವರನ್ನು ವಜಾಗೊಳಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಮತ್ತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ಆರ್‌ಬಿಐ ಗವರ್ನರ್ ಇರಲಿ, ಯಾವುದೇ ವ್ಯಕ್ತಿಯ ವಿರುದ್ಧ ಯಾವುದೇ ವೈಯಕ್ತಿಕ ಟೀಕೆಯನ್ನು ನಾನು ಒಪ್ಪುವುದಿಲ್ಲ. ಆರ್‌ಬಿಐ ಮಹತ್ವದ ಸಂಸ್ಥೆಯಾಗಿದೆ,ಅದು ತನ್ನದೇ ನಿರ್ಧಾರವನ್ನು ಕೈಗೊಳ್ಳುತ್ತದೆ.ಅದರ ನಿರ್ಧಾರವನ್ನು ಯಾರೂ ಒಪ್ಪಬಹುದು ಅಥವಾ ಒಪ್ಪದಿರಬಹುದು,ಆದರೆ ಅದು ವಿಷಯಗಳ ಮೇಲಿನ ಚರ್ಚೆ ಎಂದು ಮೋದಿ ಸರಕಾರವು ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಸಂದರ್ಭದಲ್ಲಿ ಗುರುವಾರ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜೇಟ್ಲಿ ನುಡಿದರು.

ಆರ್‌ಬಿಐ ಗವರ್ನರ್‌ಗಳು ಬಹಿರಂಗವಾಗಿ ಹೆಚ್ಚು ಮಾತನಾಡಬಾರದು ಎಂದು ನೀವು ನಿರೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ ಜೇಟ್ಲಿ, ಯಾರು ಹೇಗೆ ಇರಬೇಕು ಎನ್ನುವುದು ಅವರ ವೈಯಕ್ತಿಕ ವಿಷಯವಾಗಿದೆ. ಸಚಿವರಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವವರಿದ್ದಾರೆ. ನಾನೂ ಹೊರಗಡೆ ನನ್ನ ಸಚಿವಾಲಯಕ್ಕೆ ಸಂಬಂಧಿಸದ ಗೊಡ್ಡು ವಿಚಾರಗಳ ಬಗ್ಗೆ ಮಾತನಾಡಿದ್ದಿದೆ. ಹೀಗಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬೇಡಿ ಎಂದು ನಾನು ಇನ್ನೊಬ್ಬರಿಗೆ ಬೋಧಿಸುವಂತಿಲ್ಲ. ಅದು ಮುಖ್ಯವೂ ಅಲ್ಲ,ಸುಸಂಗತವೂ ಅಲ್ಲ ಎಂದು ಉತ್ತರಿಸಿದರು.

ಅಸಹಿಷ್ಣುತೆ ಕುರಿತು ಚರ್ಚೆಯಲ್ಲಿ ರಾಜನ್ ಅವರ ಬಹಿರಂಗ ಹೇಳಿಕೆಗಳು ಅಥವಾ ಭಾರತೀಯ ಆರ್ಥಿಕತೆ ಕುರಿತಂತೆ ‘ಕುರುಡರ ನಾಡಿನಲ್ಲಿ ಒಕ್ಕಣ್ಣನೇ ರಾಜ’ಎಂಬ ಹೋಲಿಕೆಯ ಬಗ್ಗೆ ಬಿಜೆಪಿ ಮತ್ತು ಸರಕಾರದಲ್ಲಿ ಅಸಮಾಧಾನವಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News