ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ

Update: 2016-05-26 18:02 GMT

ಕಲ್ಯಾಣ್, ಮೇ 26: ದೊಂಬಿವಿಲಿಯ ಮಹಾರಾಷ್ಟ್ರ ಕೈಗಾರಿಕಾಭಿವೃದ್ಧಿ ನಿಗಮದಲ್ಲಿರುವ (ಎಂಐಡಿಸಿ) ಆಚಾರ್ಯ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ಭಾರೀ ಬಾಯ್ಲರ್ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸ್ಫೋಟ ಸಂಭವಿಸಿದ ಕಾರ್ಖಾನೆಯಲ್ಲಿ ಇನ್ನೂ ಹಲವಾರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಯಿರುವುದಾಗಿ ಅಗ್ನಿ ಶಾಮಕ ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ಸ್ಫೋಟದ ಬಳಿಕ ಕಾರ್ಖಾನೆಯಲ್ಲಿ ಬೆಂಕಿ ಹರಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ.
ಎಂಐಡಿಸಿ ಹಂತ-2ರ ಪ್ಲಾಟ್ ಸಂಖ್ಯೆ ಡಬ್ಲು 2 58/59ರಲ್ಲಿರುವ ಹರ್ಬರ್ಟ್ ಬ್ರೌನ್ ಕಂಪೆನಿಯಲ್ಲಿ (ಆಚಾರ್ಯ) ಸಂಭವಿಸಿದ ಸ್ಫೋಟದಿಂದಾಗಿ ಇತರ 6 ಕಟ್ಟಡಗಳಿಗೂ ಹಾನಿಯಾಗಿದೆ. ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
 
ಸ್ಫೋಟದ ಸುದ್ದಿ ತಿಳಿದ ಠಾಣೆ ಜಿಲ್ಲಾಧಿಕಾರಿ ಡಾ.ಮಹೇಂದ್ರ ಕಲ್ಯಾಣ್ಕರ್, ತುರ್ತು ಪರಿಶೀಲನಾ ಕ್ರಮಕ್ಕೆ ಆದೇಶಿಸಿದ್ದಾರೆ. ದುರಂತದ ಗಾಯಾಳುಗಳನ್ನು ದೊಂಬಿವಿಲಿಯ ಏಮ್ಸ್,ಆರ್.ಆರ್.ಆಸ್ಪತ್ರೆ, ಶಾಸ್ತ್ರಿನಗರ್ ಆಸ್ಪತ್ರೆ ಹಾಗೂ ಶಿವಂ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
 ಕಾರ್ಖಾನೆಯಲ್ಲಿ ಸ್ಫೋಟದ ಬಳಿಕ ಕಲ್ಯಾಣ್ ದೊಂಬಿನ ಪ್ರಮುಖ ರಸ್ತೆಗಳಲ್ಲಿ ವಾಹನಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನಸವಾರರು ತಾಸುಗಟ್ಟಲೆ ಟ್ರಾಫಿಕ್‌ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News