ಭಾರತವೀಗ ಮೂಲೆಗುಂಪಾಗಿಲ್ಲ: ಮೋದಿ

Update: 2016-05-26 18:35 GMT

ಹೊಸದಿಲ್ಲಿ, ಮೇ 26: ಭಾರತದ ಯಾವುದೇ ಸರಕಾರ ಇತ್ತೀಚಿನ ಕಾಲದಲ್ಲಿ ಮಾಡದಿರುವಂತಹ ಹೆಚ್ಚಿನ ಸುಧಾರಣೆಗಳು ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತವನ್ನೊಂದು ಪ್ರಮುಖ ದೇಶವಾಗುವಂತೆ ಮಾಡಿದ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಇಂದು, ಭಾರತವು ಮೂಲೆಯೊಂದರಲ್ಲಿ ನಿಂತಿಲ್ಲವೆಂದ ಮೋದಿ, ತನ್ನ ಸರಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೆರಿಕದ ಖ್ಯಾತ ವಾಣಿಜ್ಯ ಪತ್ರಿಕೆ ‘ವಾಲ್ ಸ್ಟ್ರೀಟ್ ಜನರಲ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಾನು ಅಧಿಕಾರಕ್ಕೆ ಬಂದ ಬಳಿಕ ಭಾರತವು ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸಿದೆ.

 ಅಮೆರಿಕದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾದ ಸಂಬಂಧವನ್ನು ಬೆಳೆಸಿದೆಯೆಂದು ಅವರು ಅಮೆರಿಕದ ಪತ್ರಿಕೆಗೆ ತಿಳಿಸಿದ್ದಾರೆ.

ಭಾರತದಲ್ಲಿ ಸುಧಾರಣೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ, ತಾನು ವೇಗ ವರ್ಧಿತ ಬೆಳೆವಣಿಗೆಯ ಹಾದಿಯೊಂದನ್ನು ಹಾಕಿದ್ದೇನೆ. ಅದರಲ್ಲಿ ಮುಂದುವರಿಯಲು ರಾಜ್ಯಗಳು ಸಹಾಯ ಮಾಡಬೇಕು. ತಾನು ವಾಸ್ತವವಾಗಿ ಗರಿಷ್ಠ ಸುಧಾರಣೆಗಳನ್ನು ಕೈಗೊಂಡಿದ್ದೇನೆ ಎಂದಿದ್ದಾರೆ. ಮುಂದೆ ಭಾರೀ ಕೆಲಸವಾಗಬೇಕಾಗಿದೆಯೆಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ತಾನು ಹೆಚ್ಚಿನ ಆರ್ಥಿಕತೆಯನ್ನು ವಿದೇಶಿ ಹೂಡಿಕೆಗಳಿಗೆ ಮುಕ್ತವಾಗಿಸಿದ್ದೇನೆ. ಭ್ರಷ್ಟಾಚಾರ ಮಟ್ಟ ಹಾಕಲು ಬದಲಾವಣೆಗಳನ್ನು ಮಾಡಿದ್ದೇನೆ, ಗ್ರಾಮೀಣ ಮೂಲ ಸೌಕರ್ಯದ ಬಿರುಕು ಮುಚ್ಚಿದ್ದೇನೆ. ಹಾಗೂ ವ್ಯಾಪಾರ ಮಾಡುವುದನ್ನು ಸುಲಭವಾಗಿಸಿದ್ದೇನೆಂದು ಮೋದಿ ಹೇಳಿದ್ದಾರೆ.
ಮಹತ್ತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯು ಈ ವರ್ಷ ಅಂಗೀಕಾರಗೊಳ್ಳುವುದನ್ನು ತಾನು ನಿರೀಕ್ಷಿಸುತ್ತಿದ್ದೇನೆಂದು ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News