ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರ ಸ್ವೀಕಾರ

Update: 2016-05-27 07:56 GMT

ಕೋಲ್ಕತಾ, ಮೇ 27: ಸತತ ಎರಡನೆ ಅವಧಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಶುಕ್ರವಾರ ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೋಲ್ಕತಾದ ಖ್ಯಾತ ರೆಡ್ ರೋಡ್‌ನಲ್ಲಿ ಶುಕ್ರವಾರ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಮಮತಾರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಮತಾ ಅವರೊಂದಿಗೆ 41 ಸಚಿವರು ಅಧಿಕಾರ ಸ್ವೀಕರಿಸಿದರು.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ಧುರೀಣ ಲಾಲು ಪ್ರಸಾದ್ ಯಾದವ್, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ, ಕೇಂದ್ರ ಸಚಿವ ಬಬೂಲ್ ಸುಪ್ರಿಯೋ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸಹಿತ ಹಲವು ಗಣ್ಯಾತಿಗಣ್ಯರು ಹಾಜರಾಗಿದ್ದರು. ಕಾಂಗ್ರೆಸ್ ಪಕ್ಷ ಸಮಾರಂಭದಿಂದ ದೂರ ಉಳಿದಿತ್ತು.

ರಾಜ್ಯದ ಇತಿಹಾಸದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿ ಹಾಗೂ ಮಾಜಿ ನಟಿ ರೂಪಾ ಗಂಗುಲಿ ಭಾಗವಹಿಸಿದ್ದರು. 20,000 ಜನರಿಗೆ ಪಾಸ್ ಇಲ್ಲದೆಯೇ ಸಮಾರಂಭ ವೀಕ್ಷಿಸಲು ಅವಕಾಶ ನೀಡಲಾಗಿತ್ತು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ 211 ಸೀಟುಗಳನ್ನು ಗೆದ್ದುಕೊಂಡು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News