ಕಣ್ಣಿರು ಸುರಿಸುತ್ತಿರುವ ನೀರುಳ್ಳಿ ಬೆಳೆಗಾರರು

Update: 2016-05-27 16:10 GMT

ಹೊಸದಿಲ್ಲಿ, ಮೇ 27: ನೀರುಳ್ಳಿಯ ಬೆಲೆ ಮತ್ತೊಮ್ಮೆ ಜನರ ಕಣ್ಣುಗಳಲ್ಲಿ ನೀರು ತರಿಸಿದೆ. ಆದರೆ, ಈ ಬಾರಿ ಗ್ರಾಹಕರ ಸರದಿಯಾಗಿರದೆ ಬೆಳೆಗಾರರ ಸರದಿಯಾಗಿದೆ.
ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ನೀರುಳ್ಳಿಯ ಭರ್ಜರಿ ಉತ್ಪಾದನೆ ದೇಶಾದ್ಯಂತದ ತರಕಾರಿ ಮಾರುಕಟ್ಟೆಗಳಲ್ಲಿ ನೀರುಳ್ಳಿಯ ಸಗಟು ಬೆಲೆಯ ಮೇಲೆ ಪರಿಣಾಮ ಬೀರಿದೆ.
ಈ ತಿಂಗಳ ಆರಂಭದಲ್ಲಿ, ಪುಣೆ ಎಪಿಎಂಸಿಗೆ 950 ಕಿ.ಗ್ರಾಂ. ನೀರುಳ್ಳಿ ಮಾರಾಟ ಮಾಡಿ ಕೇವಲ ರೂ.1 ನಿವ್ವಳ ಲಾಭ ಗಳಿಸಿದ್ದ ರೈತನೊಬ್ಬ ಮಾಧ್ಯಮಗಳಿಗೆ ಸುದ್ದಿಯಾಗಿದ್ದನು.
ಚಂಡಿಗಡದ ಪ್ರಮುಖ ಧಾನ್ಯಗಳ ಮಾರುಕಟ್ಟೆಗೆ ಪಂಜಾಬ್, ಹರ್ಯಾಣ ಹಾಗೂ ಸಗಟಾಗಿ ರಾಜಸ್ಥಾನ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳು ನೀರುಳ್ಳಿಯ ಮೂಲಗಳಾಗಿವೆ. ಇಲ್ಲಿ ಸಗಟು ದರ ಕಿ.ಗ್ರಾಂ.ಗೆ ರೂ.6-7 ಇದೆ. ಇದು ಸಾಗಾಟ ವೆಚ್ಚ ಸೇರಿಸಿದ ನಂತರದ ಬೆಲೆಯಾಗಿದೆ. ಏಶ್ಯಾದ ಅತಿ ದೊಡ್ಡ ನೀರುಳ್ಳಿ ಮಾರುಕಟ್ಟೆ ಎನಿಸಿರುವ ಮಹಾರಾಷ್ಟ್ರದಲ್ಲಿ ನೀರುಳ್ಳಿಯ ಬೆಲೆ ಕಿ.ಗ್ರಾಂಗೆ ರೂ.3-4 ಇದೆ.
ಮಾರುಕಟ್ಟೆಯಲ್ಲಿ ನೀರುಳ್ಳಿಯ ಬೆಲೆ ಕುಸಿದಿದೆ. ಅದು ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ. ಆದುದರಿಂದ ಅವರು ಭಾರೀ ಪ್ರಮಾಣ ಖರೀದಿ ಮಾಡುತ್ತಿಲ್ಲ ಎಂದು ಸೆಕ್ಟರ್ 26 ಮಾರುಕಟ್ಟೆ ಸಂಘದ ಅಧ್ಯಕ್ಷ ಬಲ್ಬೀರ್ ಸಿಂಗ್ ಹೇಳುತ್ತಾರೆ.
ಇಲ್ಲಿ ನೀರುಳ್ಳಿ ಚಿಲ್ಲರೆಯಾಗಿ ಕಿ.ಗ್ರಾಂ.ಗೆ ರೂ.17-18ಕ್ಕೆ ಮಾರಾಟವಾಗುತ್ತಿದೆ.
ಇದು ತಮಗೆ ಅತ್ಯಂತ ಕೆಟ್ಟ ವರ್ಷವಾಗಿದೆ. ಹೆಚ್ಚಿನ ರೈತರು ನೀರುಳ್ಳಿಯನ್ನು ಮಾರುಕಟ್ಟೆಗೆ ಕಳುಹಿಸದೆ ಗ್ರಾಮಗಳಲ್ಲಿ ತಾವೇ 50ಕಿ.ಗ್ರಾಂನ ಚೀಲಕ್ಕೆ ರೂ. 200ರಂತೆ ಮಾರುತ್ತಿದ್ದಾರೆಂದು ಯಮುನಾ ನಗರ್ ಜಿಲ್ಲೆಯ ರೈತ ಜಗ್ಮಲ್ ಕಾಂಬೋಜ್ ಎಂಬವರು ತಿಳಿಸಿದ್ದಾರೆ.
ಇದು ಕೃತಕ ಬೆಲೆ ಇಳಿತವೆಂದು ಕೆಲವರು ಅಭಿಪ್ರಾಯಿಸಿದ್ದಾರೆ. ಬೆಲೆ ಕುಸಿದಿಲ್ಲ. ಆದರೆ, ವ್ಯಾಪಾರಿಗಳು ಇಂತಹ ವದಂತಿ ಹರಡುತ್ತಿದ್ದಾರೆ. ಒಂದು ವಾರದ ಹಿಂದೆ ತಾನು ಮಧ್ಯಮ ದರ್ಜೆಯ ನೀರುಳ್ಳಿಯನ್ನು ಕಿ.ಗ್ರಾಂಗೆ ರೂ.9.50ರಂತೆ ಮಾರಿದ್ದೆನೆಂದು ಪಾಟಿಯಾಲದ ರೈತ ಕೆವಿಎಸ್ ಸಿಧು ಎಂಬವರು ಹೇಳಿದ್ದಾರೆ.
ಕಳೆದ ವರ್ಷ ನೀರುಳ್ಳಿಗೆ ಭಾರೀ ಬೆಲೆ ಬಂದುದರಿಂದ ಈ ವರ್ಷ ರೈತರು ಭಾರೀ ಪ್ರಮಾಣದಲ್ಲಿ ನೀರನ್ನು ಬೆಳೆದಿದ್ದಾರೆಂಬುದು ವ್ಯಾಪರಿಗಳಿಗೆ ತಿಳಿದಿದೆ. ಈಗ ಅವರು ಗಾಬರಿ ಹುಟ್ಟಿಸಿ ರೈತರಿಗೆ ಮೋಸ ಮಾಡಿತ್ತಿದ್ದಾರೆ. ಬೆಲೆ ಭಾರೀ ಕುಸಿದಿದೆಯೆಂದು ಪ್ರಚಾರ ಮಾಡಿತ್ತಿದ್ದಾರೆ. ಇದರಿಂದ ರೈತರು ಸಿಕ್ಕಿದ ಬೆಲೆಗೆ ಉತ್ಪನ್ನ ಮಾರುವಂತೆ ವ್ಯಾಪರಿಗಳು ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ನೀರುಳ್ಳಿಯ ವ್ಯವಹರಾದಲ್ಲಿ ವಿಚಿತ್ರ ಚಲನೆ ನಡೆಯುತ್ತಿದೆಯೆಂಬುದು ಸ್ಪಷ್ಟ ರೈತರು ಹಾಗೂ ವ್ಯಾಪಾರಿಗಳು ನಡುವೆ ಬೆಕ್ಕು ಮತ್ತು ಇಲಿಯ ಆಟ ನಡೆಯುತ್ತಿದೆ.
ಈ ವಾರ ಆರಂಭದಲ್ಲಿ ನೀರುಳ್ಳಿಯ ಬೆಲೆ ತೀವ್ರ ಇಳಿಕೆ ಕಂಡ ಬಳಿಕ, ಏಶ್ಯದ ಅತಿ ದೊಡ್ಡ ಸಗಟು ಮಾರಿಕಟ್ಟೆಯೆನಿಸಿರುವ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಶೇ.12ರಷ್ಟು ಏರಿಕೆಯಾಗಿದೆ. ಅಲ್ಲಿ,ಮೂರು ದಿನ್ದ ಹಿಂದೆ ಕ್ವಿಂಟಾಲ್‌ಗೆ ರೂ. 750 ಇದ್ದ ನೀರುಳ್ಳಿಯ ಬೆಲೆ ಗುರುವಾರ ರೂ.840ಕ್ಕೆ ನೆಗೆದಿತ್ತು.
ಮಹಾರಾಷ್ಟ್ರದ ಚಿಲ್ಲರೆ ಮಾರುಕಟ್ಟೆಗಳಲ್ಲಿ ವಾರದ ಹಿಂದೆ ರೂ.5 ಇದ್ದ ನೀರುಳ್ಳಿ ಈಗ ಕಿ.ಗ್ರಾಂ.ಗೆ 10ರಂತೆ ಮಾರಾಟವಾಗುತ್ತಿದೆ. ರೈತರು ನೀರುಳ್ಳಿ ಮಾರಾಟಕ್ಕೆ ಹಿಂಜರಿಯುತ್ತಿರುವುದು ಸಗಟು ಮಾರುಕಟ್ಟೆಯಲ್ಲಿ ಅಲ್ಪ ಬೆಲೆಯೇರಿಕೆಗೆ ಕಾರಣವಾಗಿದೆ.
ಲಾಸಲ್‌ಗಾಂವ್‌ಗೆ ಇತ್ತೀಚೆಗೆ ಬರುವ ಈರುಳ್ಳಿ ಬೇಸಿಗೆಯ ಬೆಳೆಯಾಗಿದೆ. ಅದು 3 ತಿಂಗಳಿಗೂ ಹೆಚ್ಚುಕಾಲ ಹಾಳಾಗದೆ ಉಳಿಯುತ್ತದೆ. ಆದುದರಿಂದ ರೈತರು ಅದನ್ನು ಮಾರುವ ಬದಲು ದಾಸ್ತಾನು ಇರಿಸಿಕೊಳ್ಳುತ್ತಿದ್ದಾರೆಂದು ವಿಶಾಲ್ ಮಾನೆಯೆಂಬ ಬೆಳೆಗಾರ ತಿಳಿಸಿದ್ದಾರೆ.
ಆದರೆ, ನೀರುಳ್ಳಿಯ ಭಾರೀ ಬೆಲೆ ಕುಸಿತ ದಕ್ಷಿಣ ಭಾರತದಲ್ಲಿ ಪ್ರಭಾವ ಬೀರಿಲ್ಲ. ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದ ನೀರುಳ್ಳಿ ತರಿಸಿಕೊಳ್ಳುತ್ತಿರುವ ತಮಿಳುನಾಡಿನ ಅತಿ ದೊಡ್ಡ ತರಕಾರಿ ಮಾರಕಟ್ಟೆ ಕೊಯಂಬೇಡುವಿನಲ್ಲಿ ಸಗಟು ದರವು ಕಿ.ಗ್ರಾಂ.ಗೆ ರೂ.15ರಿಂದ 20ರ ನಡುವಿದೆ.
ನಾಸಿಕ್‌ನಲ್ಲಿ ಕಿ.ಗ್ರಾಂಗೆ ರೂ.1ಕ್ಕೆ ಕುಸಿದಿರುವ ನೀರುಳ್ಳಿಯ ಪರಿಣಾಮ ಇಲ್ಲಿ ಇದುವರೆಗೆ ಆಗಿಲ್ಲವೆಂದು ಕೊಂಬೇಡು ತರಕಾರಿ ಮಾರುಕಟ್ಟೆ ಸಂಘದ ಎ.ಸೆಲ್ವರಾಜ್ ಎಂಬವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News