ಅರುಣಾಚಲ ಹುಲಿ ಧಾಮಕ್ಕೆ ಜೈವಿಕ ವೈವಿಧ್ಯ ಪ್ರಶಸ್ತಿ

Update: 2016-05-27 16:51 GMT

 ಇಟಾನಗರ,ಮೇ 27: ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿರುವ ಪಕ್ಕೆ ಹುಲಿ ಅಭಯಾರಣ್ಯವು ತನ್ನ ಹಾರ್ನ್‌ಬಿಲ್(ಮಂಗಟ್ಟೆ) ಗೂಡುಗಳ ದತ್ತು ಕಾರ್ಯಕ್ರಮಕ್ಕಾಗಿ ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಷ್ಟ್ರೀಯ ಜೈವಿಕ ವೈವಿಧ್ಯ ಪ್ರಾಧಿಕಾರ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಹಯೋಗದೊಂದಿಗೆ ನೀಡುವ ಈ ವರ್ಷದ ‘ಭಾರತ ಜೈವಿಕ ವೈವಿಧ್ಯ’ಪ್ರಶಸ್ತಿಗೆ ಪಾತ್ರವಾಗಿದೆ. ‘ಅಳಿವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆ ’ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಹಾರ್ನ್‌ಬಿಲ್ ಗೂಡುಗಳ ದತ್ತು ಕಾರ್ಯಕ್ರಮವು ಪಕ್ಕೆ ಹುಲಿ ಅಭಯಾರಣ್ಯದ ಆಸುಪಾಸಿನ ಪ್ರದೇಶಗಳಲ್ಲಿ ಕಂಡುಬರುವ ನಾಲ್ಕು ಜಾತಿಗಳ ಹಾರ್ನ್‌ಬಿಲ್ ಹಕ್ಕಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಆರ್‌ಎಫ್‌ಒ ಕಿಮೆ ರಾಂಬಿಯಾ ತಿಳಿಸಿದರು.

ಘೋರಾ-ಆಭೆ ಸೊಸೈಟಿ, ನಿಸರ್ಗ ಸಂರಕ್ಷಣಾ ಪ್ರತಿಷ್ಠಾನ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಡಿ ನಗರವಾಸಿಗಳು ಪಕ್ಕೆ ಹುಲಿ ಅಭಯಾರಣ್ಯದ ಸುತ್ತಲಿನ ಹಾರ್ನ್‌ಬಿಲ್ ಹಕ್ಕಿಗಳ ಗೂಡುಗಳ ರಕ್ಷಣೆಗೆ ಹಣವನ್ನು ದೇಣಿಗೆಯಾಗಿ ನೀಡುತ್ತಾರೆ. ಮೇ 22ರಂದು ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News