ನೆಹರೂರನ್ನು ಹೊಗಳಿದ ಐಎಎಸ್ ಅಧಿಕಾರಿಯ ಎತ್ತಂಗಡಿ

Update: 2016-05-27 16:55 GMT

ಭೋಪಾಲ್, ಮೇ 27: ಫೇಸ್‌ಬುಕ್ ಪೋಸ್ಟ್‌ಒಂದರಲ್ಲಿ ಜವಾಹರಲಾಲ್ ನೆಹರೂರನ್ನು ಹೊಗಳಿದ್ದ ಐಎಎಸ್ ಅಧಿಕಾರಿಯೊಬ್ಬರನ್ನು ಮಧ್ಯಪ್ರದೇಶ ಸರಕಾರ ವರ್ಗಾವಣೆ ಮಾಡಿದೆ.

ಬರ್ವಾನಿಯ ಜಿಲ್ಲಾ ಕಲೆಕ್ಟರ್ ಆಗಿದ್ದ ಅಜಯ್ ಸಿಂಗ್ ಗಂಗ್ವಾರ್‌ರನ್ನು ನಿನ್ನೆ ರಾತ್ರಿ ಭೋಪಾಲದ ವಿಧಾನಸಭೆಯ ಸಹಾಯಕ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಗಂಗ್ವಾರ್ 2005ರಲ್ಲಿ ರಾಜ್ಯಕೇಡರ್‌ನಿಂದ ಐಎಎಸ್ ಕೇಡರ್‌ಗೆ ಭಡ್ತಿ ಪಡೆದಿದ್ದರು.
 ರಾಜ್ಯ ಸರಕಾರವು ಗಂಗ್ವಾರ್‌ರನ್ನು ಭೋಪಾಲದ ಮಂತ್ರಾಲಯದ ಸಹಾಯಕ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆಯೆಂದು ರಾಜ್ಯದ ಸಾರ್ವಜನಿಕ ಸಂಬಂಧ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದಿಯಲ್ಲಿ ಬರೆದಿದ್ದ ಫೇಸ್‌ಬುಕ್ ಪೋಸ್ಟ್‌ಒಂದರಲ್ಲಿ ಗಂಗ್ವಾರ್, ‘‘ನೆಹರೂ ಮಾಡಬಾರದ ತಪ್ಪುಗಳಿದ್ದರೆ ನನಗೆ ತಿಳಿಸಿ, 1947ರಲ್ಲಿ ಹಿಂದೂ ತಾಲಿಬಾನಿ ರಾಷ್ಟ್ರವಾಗುವುದರಿಂದ ಅವರು ನಮ್ಮನೆಲ್ಲ ತಡೆದಿದ್ದುದು ತಪ್ಪೇ?’’ ಎಂದು ಪ್ರಶ್ನಿಸಿದ್ದಾರೆ.
ಐಐಟಿ, ಇಸ್ರೊ, ಬಾರ್ಕ್, ಐಐಎಸ್‌ಬಿ, ಐಐಎಂ, ಬಿಎಸ್‌ಇಎಲ್ ಉಕ್ಕು ಘಟಕ, ಅಣೆಕಟ್ಟುಗಳು, ಉಷವಿದ್ಯುತ್ ಸ್ಥಾವರಗಳನ್ನು ಆರಂಭಿಸಿದ್ದು ಅವರ ತಪ್ಪೇ? ಆಸಾರಾಂ ಹಾಗೂ ರಾಮದೇವ್‌ರಂತಹ ಬುದ್ಧಿಜೀವಿಗಳ ಬದಲಿಗೆ ಸಾರಾಭಾಯಿ, ಹೋಮಿ ಜಹಾಂಗೀರರನ್ನು ಗೌರವಿಸಿದ್ದು ಅವರ ತಪ್ಪೇ? ಎಂದವರು ಕೇಳಿದ್ದಾರೆ.

ಈ ಎಫ್‌ಬಿ ಪೋಸ್ಟ್ ಸೇವಾ ನಿಯಮಗಳ ಉಲ್ಲಂಘನೆಯಾಗಿರುವುದರಿಂದ ಮೇಲಧಿಕಾರಿಗಳು ಅಸಮಾಧಾನಗೊಂಡಿದ್ದರು. ಅದರಂತೆ ಪ್ರಾಥಮಿಕ ತನಿಖೆಯೊಂದನ್ನು ನಡೆಸಿ ಗಂಗ್ವಾರ್‌ರನ್ನು ವರ್ಗಾವಣೆ ಮಾಡಲಾಗಿದೆ.
ಫೇಸ್‌ಬುಕ್‌ನಲ್ಲಿ ಗಂಗ್ವಾರ್‌ರ ಬರಹ ಪ್ರಕಟವಾದಂತೆಯೇ ಅವರನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಬಹುದೆಂಬ ಮಾತು ಕೇಳಿಬಂದಿತ್ತು.

ಆದಾಗ್ಯೂ ವರ್ಗಾವಣೆ ಆದೇಶದಲ್ಲಿ ನೆಹರೂ ಕುರಿತ ಫೇಸ್‌ಬುಕ್ ಪೋಸ್ಟ್‌ನ ಬಗ್ಗೆ ಯಾವುದೇ ಉಲ್ಲೇಖವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News