ಭಾರತೀಯ ರೈಲ್ವೆಯನ್ನು ‘ಐಸಿಯು’ನಿಂದ ಹೊರಕ್ಕೆ ತರಲು ಯತ್ನ: ಸಚಿವ ಪ್ರಭು

Update: 2016-05-27 16:57 GMT

ಹೊಸದಿಲ್ಲಿ,ಮೇ 27: ಭಾರತೀಯ ರೈಲ್ವೆಯನ್ನು ‘ಐಸಿಯು’ನಿಂದ ಹೊರಕ್ಕೆ ತರುವ ಮತ್ತು ಅದು ಸರಾಗವಾಗಿ ಉಸಿರಾಡಲು ಸಾಧ್ಯವಾಗುವ ಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಗಳು ಜಾರಿಯಲ್ಲಿವೆ ಎಂದು ರೈಲ್ವೆ ಸಚಿವ ಸುರೇಶ ಪ್ರಭು ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಈಗಲ್ಲ...ಕಳೆದ 20-30 ವರ್ಷಗಳಿಂದಲೂ ರೈಲ್ವೆ ಇಲಾಖೆಯು ತೀವ್ರ ಸಂಕಷ್ಟದಲ್ಲಿದೆ. ರಾಕೇಶ ಮೋಹನ್ ಸಮಿತಿಯ ವರದಿಯೂ ಇದನ್ನೇ ಹೇಳಿದೆ. ಇದೀಗ ರೈಲ್ವೆಯು ಸರಾಗವಾಗಿ ಕಾರ್ಯ ನಿರ್ವಹಿಸಲು ಪೂರಕ ಸ್ಥಿತಿಯನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವರು ಹೇಳಿದರು.
ರೈಲ್ವೆ ಇಲಾಖೆಯನ್ನು ಸದೃಢಗೊಳಿಸುವ ಕುರಿತಂತೆ ಅವರು, ಇಲಾಖೆಯು ತನ್ನ ಕಾರ್ಯಾಚರಣೆಗಳಿಗೆ ಕಾಯಕಲ್ಪ ನೀಡಬೇಕಾಗಿದೆ. ಆ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ. ಮುಂದಿನ ಕೆಲವು ವರ್ಷಗಳಲ್ಲಿ ರೈಲ್ವೆಯು ಪ್ರಗತಿಯ ಎಂಜಿನ್ ಆಗಲಿದೆ,ಅದಕ್ಕಾಗಿ ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು.
 ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಸರಕು ಸಾಗಾಣಿಕೆ ಪ್ರಮಾಣ ಕಡಿಮೆಯಾಗುತ್ತಿದೆ ಮತ್ತು ಅದು ನಮ್ಮ ಕೈಗಳಲ್ಲಿಲ್ಲ. ಅದು ಮುಖ್ಯ ಕ್ಷೇತ್ರದ ಬೆಳವಣಿಗೆಯನ್ನು ಅವಲಂಬಿಸಿದೆ. ಮುಖ್ಯ ಕ್ಷೇತ್ರವು ಬೆಳವಣಿಗೆ ಕಂಡರೆ ಸರಕು ಸಾಗಣೆಯೂ ಹೆಚ್ಚುತ್ತದೆ. ಆದರೆ ನಾವು 1.2 ಶತಕೋಟಿ ಟನ್ ಸರಕು ಸಾಗಣೆಗೆ ಸಜ್ಜಾಗಿದ್ದೇವೆ. ರೈಲ್ವೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೇಡಿಕೆಗೆ ಮುನ್ನವೇ ಇಷ್ಟೊಂದು ಬೃಹತ್ ಸಾಗಣೆ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಇನ್ನೇನಿದ್ದರೂ ಸರಕುಗಳು ಸಾಗಣೆಗೆ ಬರಬೇಕು ಎಂದು ಹೇಳಿದರು.
ಪ್ರಯಾಣಿಕ ದರಗಳನ್ನು ಹೆಚ್ಚಿಸುವ ವಿಚಾರವಿದೆಯೇ ಎಂಬ ಪ್ರಶ್ನೆಗೆ ಸಚಿವರು, ನಿಯಂತ್ರಣ ಪ್ರಾಧಿಕಾರವು ಆ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News