ಪೊಲೀಸ್ , ನ್ಯಾಯಾಂಗದಲ್ಲಿ ಮೋದಿಯಿಂದ ಹಸ್ತಕ್ಷೇಪದ ಆರೋಪ

Update: 2016-05-28 06:41 GMT

ಅಹಮದಾಬಾದ್, ಮೇ 28 : ಪೊಲೀಸ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪವಿದೆ ಹಾಗೂ ತಾನು ಇದರಿಂದ ಬಾಧಿತನಾಗಿದ್ದೇನೆಂದು ಹೇಳುವ ಅಹಮದಾಬಾದ್ ಮೂಲದ ಹಾಗೂ ಪ್ರಸಕ್ತ ಕೆನಡಾ ನಾಗರಿಕನಾಗಿರುವ ರೋಶನ್ ಷಾ ಎಂಬ ಹೆಸರಿನ ಅನಿವಾಸಿ ಭಾರತೀಯ ತಾನು ಹಿಂದೂ ಧರ್ಮ ತ್ಯಜಿಸಿರುವುದಾಗಿ ಹಾಗೂ ಇನ್ನೆಂದೂ ಯಾವ ದಾಖಲೆಯಲ್ಲೂ ತಾನು ಹಿಂದೂ ಎಂದು ಬರೆಯುವುದಿಲ್ಲವೆಂದು ಹೇಳಿಕೊಂಡಿದ್ದಾರೆ.

ಭಾರತದ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು, ಗುಜರಾತ್ ಡಿಜಿಪಿ ಹಾಗೂ ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರವೊಂದರಲ್ಲಿ ಅವರು ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ.

‘‘ಗುಜರಾತ್ ಮಾದರಿಯಲ್ಲಿ 2000ರಲ್ಲಿ ಅನಿವಾಸಿ ಭಾರತೀಯನಾಗಿ ಹಣ ಹೂಡಿದ ನನಗೆ ಮೋಸ ಮಾಡಲಾಗಿದೆ. ನನ್ನ ಪರವಾಗಿ ಹಲವಾರು ಸಾಕ್ಷ್ಯಗಳಿದ್ದರೂ ಕೋರ್ಟ್ ಪ್ರಕರಣವೊಂದರ ತೀರ್ಪು ನನ್ನ ವಿರುದ್ಧವಾಗಿದೆ. ಭಾರತದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ರಾಜಕಾರಣಿಗಳ ಕೈಗಳಲ್ಲಿನ ಆಯುಧಗಳಾಗಿರುವುದರಿಂದ ಅನಿವಾಸಿ ಭಾರತೀಯರು ಭಾರತದಲ್ಲಿ ಹಣ ಹೂಡುವ ಮೊದಲು ಎರಡು ಬಾರಿ ಯೋಚಿಸಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ನಿಜಾರ್ಥದಲ್ಲಿ ಉಳಿದಿಲ್ಲ. ನನ್ನ ಮಕ್ಕಳು ಕೂಡ ಈ ದೇಶಕ್ಕೆ ಹಿಂದಿರುಗುವುದಿಲ್ಲವೆಂದು ನಾನಂದುಕೊಳ್ಳತ್ತೇನೆ. ಅವರು ಹಿಂದಿರುಗಿದ್ದೇ ಆದಲ್ಲಿ ಅದು ಅವರ ಜೀವನದಲ್ಲಿ ಅವರು ಮಾಡಿದ ದೊಡ್ಡ ತಪ್ಪಾಗುವುದು. ವಂಚಕರಿಂದಾಗಿ ನ್ಯಾಯ ನೀಡಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ನ್ಯಾಯವೂ ಮರೀಚಿಕೆಯಾಗುತ್ತಿದೆ,’’ಎಂದಾತ ತನ್ನ ಪತ್ರದಲ್ಲಿ ಹೇಳಿದ್ದಾರೆ.
‘‘ಭಾರತದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ದೇಶದಲ್ಲಿ ಅಚ್ಛೇದಿನ್ ಬರುವುದೇ ಇಲ್ಲ,’’ ಎಂದು ರೋಶನ್ ಷಾ ತನ್ನ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News