ಕೇರಳದ ಖಜಾನೆಯಲ್ಲಿರುವುದು ಕೇವಲ 700 ಕೋಟಿ ರೂ. ಮಾತ್ರ!: ವಿತ್ತಸಚಿವ ಥಾಮಸ್ ಐಸಾಕ್

Update: 2016-05-28 07:03 GMT

ತಿರುವನಂತಪುರಂ, ಮೇ 28: ರಾಜ್ಯದ ಖಜಾನೆಯಲ್ಲಿ 700 ಕೋಟಿರೂಪಾಯಿ ಮಾತ್ರ ಇದೆ ಎಂದು ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಸಾಲ ಪಡೆಯದೆ ಮುಂದುವರಿಯಲು ಹೊಸಸರಕಾರಕ್ಕೆ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕೇರಳದ ಆರ್ಥಿಕತೆ ಸರಿಯಾಗಲು ಮೂರು ವರ್ಷ ಬೇಕಾಗಬಹುದು. ಹೀಗಿದ್ದರೂ ನೌಕರರ ಸಂಬಳ ಮತ್ತು ಜನಸಾಮಾನ್ಯರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟನ್ನೆದುರಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಈಗಾಲೇ ಸ್ಪಷ್ಟಪಡಿಸಿದ್ದು ಬೇಗನೆ ಪಾವತಿಸಬೇಕಾದ ಸಾಲ ಆರುಸಾವಿರ ಕೋಟಿ ರೂಪಾಯಿಯಾಗಿದೆ ಎಂದು ತಿಳಿಸಿದೆ. ಹಿಂದಿನ ಸರಕಾರ ತನ್ನ ಕೊನೆಯ ಅವಧಿಯಲ್ಲಿ ಖರ್ಚನ್ನು ಭರಿಸದೆ ಮುಂದೂಡಿದ್ದು ಹೊಸಸರಕಾರದ ತಲೆಮೇಲೆ ಇಷ್ಟು ಬಾಧ್ಯತೆಗಳು ಉಳಿಯಲು ಕಾರಣ ಎಂದು ಸಚಿವರು ಹೇಳಿದ್ದಾರೆ. ಈ ಹಿಂದೆ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಐಸಾಕ್ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿರಾಕರಿಸಿದ್ದರು. ರಾಜ್ಯದ ಆರ್ಥಿಕ ಸ್ಥಿತಿ ಹೇಗಿದೆ ಎಂದು ಅವರು ಅಧಿಕಾರ ವಹಿಸಿಕೊಂಡ ಮೇಲೆ ಮನವರಿಕೆಯಾಗಲಿದೆ ಎಂದು ಉಮ್ಮನ್ ಚಾಂಡಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News