ಭಾರತದ ಚುನಾವಣಾ ಇತಿಹಾಸದಲ್ಲೇ ಪ್ರಪ್ರಥಮ

Update: 2016-05-28 11:30 GMT

ಹೊಸದಿಲ್ಲಿ, ಮೇ 28: ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣಾ ಆಯೋಗವು ತಮಿಳುನಾಡಿನ ಎರಡು ವಿಧಾನಸಭಾ ಸ್ಥಾನಗಳಿಗೆ ಹೊರಡಿಸಿದ್ದ ಚುನಾವಣಾ ಅಧಿಸೂಚನೆಯನ್ನು ರದ್ದುಗೊಳಿಸಿವೆ. ಸೂಕ್ತ ಸಮಯದಲ್ಲಿ ಹೊಸದಾಗಿ ಚುನಾವಣೆಗಳನ್ನು ನಡೆಸಲು ಅದು ನಿರ್ಧರಿಸಿವೆ. ಮತದಾರರನ್ನು ಪ್ರಭಾವಿಸಲು ಹಣ ಬಲವನ್ನು ಬಳಸಲಾಗುತ್ತಿರುವುದಕ್ಕೆ ಪುರಾವೆ ದೊರೆತಿರುವುದು ಆಯೋಗದ ಈ ನಿರ್ಧಾರಕ್ಕೆ ಕಾರಣವಾಗಿದೆ.

ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮತದಾರರಿಗೆ ಭಾರೀ ಪ್ರಮಾಣದಲ್ಲಿ ಹಣ ಹಾಗೂ ಉಡುಗೊರೆಗಳನ್ನು ಹಂಚುತ್ತಿವೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಈ ಮೊದಲು ಆಯೋಗವು ಎರಡು ಸಂದರ್ಭಗಳಲ್ಲಿ ಅರವಕುರಿಚಿ ಹಾಗೂ ತಂಜಾವೂರು ಕ್ಷೇತ್ರಗಳ ಚುನಾವಣೆಗಳನ್ನು ಮಂದೂಡಿತ್ತು.

ಮೊದಲು ಚುನಾವಣೆ ಮೇ 16ರಿಂದ ಮೇ 23ಕ್ಕೆ ಮುಂದೂಡಲ್ಪಟ್ಟಿತ್ತು. ಮೇ 21ರಂದು ಚುನಾವಣಾ ಆಯೋಗವು ಮತ್ತೊಮ್ಮೆ ಚುನಾವಣೆಯನ್ನು ಜೂ.13ಕ್ಕೆ ಮುಂದೂಡಲು ನಿರ್ಧರಿಸಿತ್ತು.

ತಮಿಳುನಾಡಿನಲ್ಲಿ ಮೇ 16ಕ್ಕೆ ಚುನಾವಣೆ ನಡೆದಿತ್ತು. ಎಡಿಎಂಕೆ ಸತತ 2ನೆ ಅವಧಿಗೆ ಅಧಿಕಾರಕ್ಕೆ ಬಂದಿದೆ.

ವೀಕ್ಷಕರು, ಕೇಂದ್ರೀಯ ವೀಕ್ಷಕರ ವಿಶೇಷ ತಂಡಗಳು, ಅರವಕುರಿಚಿ ಹಾಗೂ ತಂಜಾವೂರು ಕ್ಷೇತ್ರಗಳ ವೀಕ್ಷಕರ ವಿಶೇಷ ತಂಡಗಳು ಹಾಗೂ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವರದಿಗಳು ಹಾಗೂ ದೂರನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆಯೆಂದು ಆಯೋಗ ತಿಳಿಸಿದೆ.

ಈ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಾಗೂ ಬಹುಮಾನಗಳ ಆಮಿಷ ಒಡ್ಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಸ್ವಲ್ಪ ಕಾಲದ ಬಳಿಕ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಂತಹ ವಾತಾವರಣ ಉಂಟಾದಾಗ ಈ ಎರಡು ಕ್ಷೇತ್ರಗಳಲ್ಲಿ ಚುನಾವಣೆಗಳನ್ನು ನಡೆಸಲು ನಿರ್ಧರಿಸಲಾಗಿದೆಯೆಂದು ಅದು ಹೇಳಿದೆ.

ಸಾಮಾನ್ಯವಾಗಿ ಆಯೋಗವು ಚುನಾವಣೆಯಲ್ಲಿ ತೋಳ್ಬಲ ಬಳಕೆಯ ಸಾಕ್ಷ ದೊರೆತಾಗ ಇಂತಹ ಕಠಿಣ ಕ್ರಮ ಕೈಗೊಳ್ಳುತ್ತವೆ. ಆದರೆ, ಹಣ ಬಲದ ಉಪಯೋಗದ ಆರೋಪದಲ್ಲಿ ಅದು ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News