ಖಾಲಿಸ್ತಾನ ಉಗ್ರರ ಶಿಬಿರ: ಕೆನಡಾಗೆ ಭಾರತ ಎಚ್ಚರಿಕೆ

Update: 2016-05-30 03:12 GMT

ಚಂಡೀಗಢ, ಮೇ 30: ಪಠಾಣ್‌ಕೋಟ್ ಉಗ್ರರ ದಾಳಿ ನಡೆದು ಆರು ತಿಂಗಳ ಬಳಿಕ ಇದೀಗ ಭಾರತದ ಗುಪ್ತಚರ ವಿಭಾಗ, ಕೆನಡಾದ ಜೆಸ್ಟಿನ್ ತ್ರುದೇವ್ ಸರ್ಕಾರಕ್ಕೆ ಖಾಲಿಸ್ತಾನ ಉಗ್ರರ ಶಿಬಿರದ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸಿಕ್ಖ್ ಮುಖಂಡರನ್ನು ಕೆನಡಾ ದೇಶದ ರಕ್ಷಣಾ ಸಚಿವರಾಗಿ ನೇಮಕ ಮಾಡಿಕೊಂಡಿದ್ದು, ಖಾಲಿಸ್ತಾನ ಪರ ಉಗ್ರರು ಬ್ರಿಟಿಷ್ ಕೊಲಂಬಿಯಾದ ಮಿಷನ್ ಸಿಟಿ ಬಳಿ ಶಿಬಿರ ನಡೆಸುತ್ತಿದ್ದು, ಪಂಜಾಬ್‌ನ ಮೇಲೆ ದಾಳಿ ಮಾಡಲು ಈ ಗುಂಪು ನಿರ್ಧರಿಸಿದೆ ಎಂದು ಕೆನಡಾಗೆ ವಿವರ ನೀಡಿದೆ.

ಪಂಜಾಬ್‌ನ ಗುಪ್ತಚರ ವಿಭಾಗ ಈ ವರದಿ ತಯಾರಿಸಿದ್ದು, ಕೆನಡಾದ ಸಿಕ್ಖ್ ಹರದೀಪ್ ನಿಜ್ಜಾರ್ ಖಾಲಿಸ್ತಾನ ಉಗ್ರ ಪಡೆಯ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದು, ದಾಳಿ ನಡೆಸಲು ಸಿಕ್ಖ್ ಯುವಕರ ಪಡೆ ಕಟ್ಟಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ. ಪಂಜಾಬ್ ಸರ್ಕಾರ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಕೆನಡಾದಿಂದ ನಿಜ್ಜಾರ್ ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಲು ಕೋರಿದೆ.

ಪಠಾಣ್‌ಕೋಟ್ ದಾಳಿಯ ಬಗೆಗೂ ಇದರಲ್ಲಿ ಉಲ್ಲೇಖವಿದ್ದು, ನಿಜ್ಜಾರ್, ಪಾಕಿಸ್ತಾನದಲ್ಲಿದ್ದುಕೊಂಡು ದಾಳಿಕೋರರಿಗೆ ಶಸ್ತ್ರಾಸ್ತ್ರ ಪೂರೈಸಲು ಬಯಸಿದ್ದರು. ಆದರೆ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ನಿಜ್ಜರ್ 1995ರಿಂದಲೂ ಕೆನಡಾ ಪಾಸ್‌ಪೋರ್ಟ್‌ನಲ್ಲಿ ವಾಸವಾಗಿದ್ದು, ಪಂಜಾಬ್‌ನ ಶಂಕಿತ ಉಗ್ರಗಾಮಿ. 2007ರ ಲೂಧಿಯಾನಾದಲ್ಲಿ ಆರು ಮಂದಿಯನ್ನು ಬಲಿ ತೆಗೆದುಕೊಂಡ ಶಿಂಗಾರ್ ಸಿನಿಮಾ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದ ಆರೋಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News