ಅಮಾಯಕನ ತಾಯಿಯ ಕಣ್ಣೀರಿಗೆ ಕರಗಿ ಮಾತುಕತೆಗೆ ಮುಂದಾದ ಬರೆಲ್ವಿ ಹಾಗು ದೇವ್ ಬಂದ್ ಧಾರ್ಮಿಕ ಮುಖಂಡರು

Update: 2016-05-30 07:26 GMT

ಹೊಸದಿಲ್ಲಿ, ಮೇ 30: : ಬರೆಲ್ವಿ ಪಂಥದ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಮುಖಂಡರೊಬ್ಬರು ಇತ್ತೀಚೆಗೆ ದಾರುಲ್ ಉಲೂಂ ದೇವ್ ಬಂದ್ ಗೆ ಅನಿರೀಕ್ಷಿತ ಭೇಟಿ ನೀಡಿ ಸುನ್ನಿ ಪಂಗಡದ ಎರಡು ವಿರೋಧಿ ಬಣಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ಈ ಯತ್ನಕ್ಕೆ ಉಗ್ರಗಾಮಿಗಳೊಂದಿಗೆ ನಂಟು ಹೊಂದಿದ ಸುಳ್ಳು ಆರೋಪ ಹೊರಿಸಿ ಬಂಧಿಸಲ್ಪಟ್ಟ ಮುಸ್ಲಿಂ ಯುವಕನೊಬ್ಬನ ತಾಯಿಯ ಕಣ್ಣೀರು ಕಾರಣವೆಂದು ಸ್ವತಃ  ಅವರೇ ಹೇಳಿದರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

‘‘ನಮ್ಮ ಮಕ್ಕಳನ್ನು ಗುರಿಯಾಗಿಸಲಾಗುತ್ತಿದೆ,’’ ಎಂದು ಬರೆಲ್ವಿ ಆಂದೋಲನದ ಸ್ಥಾಪಕ ಮೌಲಾನ ಅಹಮದ್ ರಝಾ ಖಾನ್ ಅವರ ಮರಿ ಮೊಮ್ಮಗ ಮೌಲಾನ ತೌಖೀರ್ ರಝಾ ಖಾನ್ ಹೇಳಿದರು. ‘‘ಮುಸ್ಲಿಮ್ ಯುವಕರನ್ನು ಬಂಧಿಸುವವರ ವಿರುದ್ಧ ಹೋರಾಟ ಮಾಡುವ ಸಮಯ ಬಂದಿದೆ,’’ಎಂದವರು ಹೇಳಿದರು.

ಬರೆಲ್ವಿ ಪಂಥದ ಪ್ರಮುಖ ನಾಯಕ ಕಾರಿನಿಂದಿಳಿದು ಏಷ್ಯಾ ಖಂಡದ ಅತ್ಯಂತ ಪ್ರಭಾವಶಾಲಿ ಮುಸ್ಲಿಮ್ ಸೆಮಿನರಿ ದಾರುಲ್ ಉಲೂಂ ಮುಖ್ಯಸ್ಥರನ್ನು ಕಾಣಲು ತೆರಳುವುದನ್ನು ನೋಡಿ ದೇವ್ ಬಂದ್ ಜನತೆ ಒಮ್ಮೆಗೆ ಆಶ್ಚರ್ಯ ಪಟ್ಟರು. ದಾರುಲ್ ಉಲೂಂ ಮುಖ್ಯಸ್ಥರು ತೌಖೀರ್ ಅವರನ್ನು ಎದುರುಗೊಂಡರಲ್ಲದೆ, ಚಹಾ, ತಿನಿಸುಗಳ ಸೇವನೆಯ ನಂತರ ಏಕತೆಯ ಅಗತ್ಯತೆಯ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಸುಮಾರು ಒಂದು ಗಂಟೆಕಾಲ ನಡೆದ ಮಾತುಕತೆಗಳಲ್ಲಿ 25 ರಿಂದ 30 ಜನ ಭಾಗವಹಿಸಿದ್ದರು. ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಇಡೀ ಸಮುದಾಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಡುವ ಅಗತ್ಯವನ್ನು ಮಾತುಕತೆಗಳ ವೇಳೆ ಒತ್ತಿ ಹೇಳಲಾಯಿತು. ‘‘ಇತ್ತೀಚೆಗೆ ಸ್ಫೋಟದ ಸಂಚು ಹೂಡಿದ ಆರೋಪದ ಮೇಲೆ ಬಂಧಿತನಾದ ಶಕೀರ್ ಅನ್ಸಾರಿಯ ತಾಯಿಯ ಕಣ್ಣೀರು ತನ್ನ ಈ ಅನಿರೀಕ್ಷಿತ ಭೇಟಿಗೆ ಕಾರಣ,’’ ಎಂದು ತೌಖೀರ್ ಹೇಳಿದರು.

ದೆಹಲಿ ಪೊಲೀಸರ ವಿಶೇಷ ವಿಭಾಗ ಈ ತಿಂಗಳಾರಂಭದಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆಸಿದ ಹಲವು ದಾಳಿಗಳಲ್ಲಿ ಅನ್ಸಾರಿ ಸೇರಿದಂತೆ 13 ಮಂದಿ ಮುಸ್ಲಿಮ್ ಯುವಕರನ್ನು ಬಂಧಿಸಿ ತಾನು ಜೈಶ್-ಇ-ಮೊಹಮ್ಮದ್ ಸಂಘಟನೆಯ ಜಾಲವೊಂದನ್ನು ಬೇಧಿಸಿರುವುದಾಗಿ ಹೇಳಿಕೊಂಡಿತು. ಮುಂದೆ ಅವರಲ್ಲಿ 10 ಮಂದಿಯನ್ನು ಸಾಕ್ಷ್ಯಗಳ ಕೊರತೆಯೆಂದು ಹೇಳಿ ಬಿಡುಗಡೆಗೊಳಿಸಿತ್ತು. ಈ ಬೆಳವಣಿಗೆಯ ನಂತರ ತೌಖೀರ್ ಅವರು ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿದ್ದರು.

ದೇವ್ ಬಂದ್ಗಳು ಮತ್ತು ಬರೆಲ್ವಿಗಳು ಇಸ್ಲಾಂ ಧರ್ಮವನ್ನು ಅನುಸರಿಸುವವರಾದರೂ, ಪ್ರವಾದಿಯನ್ನು ಹೇಗೆ  ಅನುಸರಿಸಬೇಕು ಎಂಬ ಬಗ್ಗೆ ಎರಡೂ ಪಂಥಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News