23 ವರ್ಷಗಳ ಜೈಲು ವಾಸದ ಬಳಿಕ ನಾನೀಗ ಜೀವಂತ ಶವದಂತೆ ಇದ್ದೇನೆ

Update: 2016-05-30 08:16 GMT

ಹೊಸದಿಲ್ಲಿ, ಮೇ 30:  ಜೈಪುರ್ ಕಾರಾಗೃಹದಲ್ಲಿ 23 ವರ್ಷಗಳ ಕಾಲ ಇದ್ದು 17 ದಿನಗಳ ಹಿಂದೆ ಬಿಡುಗಡೆಯಾದಂದಿನಿಂದ ಆತನಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ನಿದ್ದೆಯೂ ಆತನತ್ತ ಸುಳಿದಿಲ್ಲ.

ಜೈಲಿನಿಂದ ಹೊರಗೆ ಕಾಲಿಟ್ಟಾಗ ತನಗಿಂತ ಎರಡು ವರ್ಷ ಹಿರಿಯನಾದ ತನ್ನ ಸಹೋದರ ಝಹೀರುದ್ದೀನ್ ಅಹಮದ್ ನನ್ನು ನೋಡಿ ಒಂದು ಕ್ಷಣ ನಿಸಾರುದ್ದೀನ್  ಅಹಮದ್ ಗೆ ಕಾಲುಗಳು ತೀವ್ರ ಭಾರವಾಗಿ ಮರಗಟ್ಟಿದ ಅನುಭವವಾಯಿತು. ‘‘ನಾನೀಗ ಸ್ವತಂತ್ರ ಎಂಬುದನ್ನೇ ನಾನು ಅರೆ ಕ್ಷಣ ಮರೆತು ಬಿಟ್ಟೆ,’’ಎಂದು ಹೇಳುತ್ತಾರೆ ನಿಸಾರ್.

ಬಾಬ್ರಿ ಮಸೀದಿ ಧ್ವಂಸದ ಪ್ರಥಮ ವರ್ಷಾಚರಣೆಯ ಸಂದರ್ಭ ಐದು ರೈಲುಗಳಲ್ಲಿ ಸಂಭವಿಸಿದ ಸ್ಫೋಟ ಸಂಬಂಧ ನಿಸಾರುದ್ದೀನ್ ಮತ್ತಿಬ್ಬರನ್ನು ಬಂಧಿಸಲಾಗಿದ್ದರೆ, ಮೇ 11ರಂದು ಸುಪ್ರೀಂ ಕೋರ್ಟ್ ಅವರೆಲ್ಲರನ್ನೂ ದೋಷಮುಕ್ತಗೊಳಿಸಿ ಕೂಡಲೇ ಬಿಡುಗಡೆಗೊಳಿಸುವುಂತೆ ಆದೇಶಿಸಿತ್ತು. ಈ ಆದೇಶ ಬರುವಷ್ಟರ ಹೊತ್ತಿಗೆ ಅವರೆಲ್ಲರ ಕುಟುಂಬಗಳೂ ನ್ಯಾಯಕ್ಕಾಗಿ ಹೋರಾಟ ನಡೆಸಿ ಜರ್ಝರಿತಗೊಂಡಿದ್ದವು.

‘‘ನನ್ನ ಜೀವನದ 8,150 ದಿನಗಳನ್ನು ನಾನು ಜೈಲಿನೊಳಗಡೆ ಕಳೆದಿದ್ದೇನೆ. ನನಗೆ ಜೀವನ ಅಂತ್ಯವಾಗಿದೆ. ನೀವು ನೋಡುತ್ತಿರುವುದು ಜೀವಂತ ಶವ ಮಾತ್ರ,’’ ಎಂದು ವಿಷಾದದಿಂದ ನುಡಿಯುತ್ತಾನೆ ನಿಸಾರ್.

‘‘ಅವರು ನನ್ನನ್ನೆತ್ತಿ ಜೈಲಿಗೆಸೆದಾಗ ಆಗಿನ್ನೂ ನನಗೆ 20 ವರ್ಷ ತುಂಬಿರಲಿಲ್ಲ. ನನಗೀಗ 43. ಕೊನೆಯ ಬಾರಿ ನನ್ನ ಕಿರಿಯ ಸಹೋದರಿಯನ್ನು ನೋಡಿದ್ದಾಗ ಆಕೆಗೆ 12 ವರ್ಷವಾಗಿತ್ತು. ಈಗ ಆಕೆಗೆ 12 ವರ್ಷದ ಮಗಳಿದ್ದಾಳೆ’’ ಎನ್ನುತ್ತಾನೆ ನಿಸಾರುದ್ದೀನ್.

ಬಿಡುಗಡೆಯಾದ ರಾತ್ರಿ ಆತ ಜೈಪುರದ ಹೊಟೇಲ್ ಒಂದರಲ್ಲಿ ತಂಗಿದ್ದ. ‘‘ಅಲ್ಲಿ ಹಾಸಿಗೆಯಿದ್ದರೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ,’’ಎಂದು ಆತ ವಿವರಿಸುತ್ತಾನೆ.

ತಾನು ಎರಡನೇ ವರ್ಷದ ಫಾರ್ಮೆಸಿ ವಿದ್ಯಾರ್ಥಿಯಾಗಿದ್ದಾಗ ಜನವರಿ 15, 1994ರಲ್ಲಿ ಕರ್ನಾಟಕದ ಗುಲ್ಬರ್ಗದ ತನ್ನ ಮನೆಯ ಸಮೀಪ ತನ್ನನ್ನು ಪೊಲೀಸರು ಎಳೆದೊಯ್ದ ಘಟನೆ ವಿವರಿಸುತ್ತಾರೆ. ‘‘ನಾನು ಕಾಲೇಜಿಗೆ ಹೊರಟಿದ್ದೆ. ಪೊಲೀಸ್ ವಾಹನವೊಂದು ಅಲ್ಲಿ ಕಾಯುತ್ತಿತ್ತು. ಪೊಲೀಸನೊಬ್ಬ ರಿವಾಲ್ವರ್ ತೋರಿಸಿ ನನ್ನನ್ನು ಬಲವಂತವಾಗಿ ವಾಹನದೊಳಗೆ ಕೂರಿಸಿದ. ಹೈದರಾಬಾದಿನಿಂದ ಬಂದ ಪೊಲೀಸ್ ತಂಡ ನನ್ನನ್ನು ಹೈದರಾಬಾದಿಗೆ ಕರೆದುಕೊಂಡು ಹೋಯಿತು. ಕರ್ನಾಟಕ ಪೊಲೀಸರಿಗೆ ನನ್ನ ಬಂಧನದ ಬಗ್ಗೆ ಮಾಹಿತಿಯಿರಲಿಲ್ಲ,’’ಎನ್ನುತ್ತಾನೆ ನಿಸಾರ್.

ಫೆಬ್ರವರಿ 28, 1994ರಂದು ತನ್ನನ್ನು ಕೋರ್ಟ್ ಮುಂದೆ ಹಾಜರು ಪಡಿಸಿದಾಗಲೇ ನನ್ನ ಕುಟುಂಬಕ್ಕೆ ನಾನೆಲ್ಲಿದ್ದೇನೆಂದು ಗೊತ್ತಾಗಿದ್ದು, ಅದೇ ವರ್ಷ ಎಪ್ರಿಲ್ ನಲ್ಲಿ ಮುಂಬೈನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ನಿಸಾರ್ ರ ಹಿರಿಯ ಸಹೋದರನನ್ನೂ ಬಂಧಿಸಲಾಗಿತ್ತು.

ನಮ್ಮ ತಂದೆ ನ್ಯಾಯಕ್ಕಾಗಿ ಏಕಾಂಗಿ ಹೋರಾಟ ನಡೆಸಿ ಯಾವುದೇ ಆಶಾವಾದವಿಲ್ಲದೆ 2006 ರಲ್ಲಿ ಮೃತರಾದರು. ಈಗ ನಮಗೆ ಏನೂ ಉಳಿದಿಲ್ಲವೆನ್ನುತ್ತಾನೆ ನಿಸಾರ್.

ನಿಸಾರ್ ಸಹೋದರ ಝಹೀರನಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೂ ಆತನಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾದ ಹಿನ್ನೆಲೆಯಲ್ಲಿ ಆತನನ್ನು 2008ರಲ್ಲಿ ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಪೊಲೀಸ್ ಕಸ್ಟಡಿಯಲ್ಲಿರುವಾಗ ಅವರು ನೀಡಿದ ಹೇಳಿಕೆಗಳ ಹೊರತಾಗಿ ಪೊಲೀಸರಲ್ಲಿ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿರಲಿಲ್ಲ. ‘‘ನಮ್ಮ ಮೇಲೆ ತಪ್ಪು ಆರೋಪ ಹೊರಿಸಲಾಗಿತ್ತು. ನಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಿದ್ದಕ್ಕೆ ಸುಪ್ರೀಂ ಕೋರ್ಟಿಗೆ ಧನ್ಯವಾದಗಳು. ಆದರೆ ಕಳೆದು ಹೋದ ಜೀವನವನ್ನು ಯಾರು ವಾಪಸ್ ನೀಡುತ್ತಾರೆ?’’ಎಂದು ದಯನೀಯವಾಗಿ ಪ್ರಶ್ನಿಸುತ್ತಾರೆ ನಿಸಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News