ಹರ್ಯಾಣ ಜಾಟ್ ಹಿಂಸಾಚಾರದ ಸಂದರ್ಭ ಸೇನೆಯ ದಾರಿ ತಪ್ಪಿಸಿದ ಪೊಲೀಸರು?

Update: 2016-05-31 03:32 GMT

ಚಂಡೀಗಢ, ಮೇ 31: ಹರ್ಯಾಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯ ಕಳೆದ ಫೆಬ್ರವರಿಯಲ್ಲಿ ಹಿಂಸಾಚಾರಕ್ಕೆ ಇಳಿದಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇನೆಯ ದಿಕ್ಕು ತಪ್ಪಿಸಿದ್ದರೇ? ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪ್ರಕಾಶ್ ಸಿಂಗ್ ಸಮಿತಿ ವರದಿ ಟೈಮ್ಸ್ ಆಪ್ ಇಂಡಿಯಾಗೆ ಲಭಿಸಿದ್ದು, ಹಲವೆಡೆ ಸ್ಥಳೀಯ ಅಧಿಕಾರಿಗಳು ಸೇನಾಪಡೆಯ ದಾರಿ ತಪ್ಪಿಸಿದ್ದಾರೆ ಅಥವಾ ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಗುಂಪು ಚದುರಿಸಲು ಬಳಸಿದ ಸೇನಾಬಲದ ಬಗ್ಗೆ ಕೂಡಾ ಸಮಿತಿ ಪ್ರಶ್ನೆ ಹಾಕಿದೆ. ರಾಜ್ಯಕ್ಕೆ ಹಿಂಸಾಚಾರ ತಡೆಯಲು 12 ಬೆಟಾಲಿಯನ್‌ಗಳು ಬೇಕಿತ್ತೇ ಎಂದೂ ಪ್ರಶ್ನಿಸಲಾಗಿದೆ. ಇಂಥ ಆಂತರಿಕ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಲು ಇಷ್ಟೊಂದು ಸಂಖ್ಯೆಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಿರುವುದು ತೀರಾ ದುರದೃಷ್ಟಕರ. ಅದು ಕೂಡಾ ಸೇನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಈ ಗಲಭೆ ನಿಯಂತ್ರಣಕ್ಕೆ ನಿಯೋಜಿಸಿದ ಸೇನಾ ಸಿಬ್ಬಂದಿಯ ಪ್ರಮಾಣ, ಸೇನೆಯ ಮೇಲೆ ದಾಳಿ ನಡೆದಾಗ ಬಳಸಬಹುದಾದಷ್ಟು ಬೃಹತ್ತಾಗಿತ್ತು ಎಂದು ವರದಿ ವಿವರಿಸಿದೆ.
ಈ ವರದಿಯಲ್ಲಿ ಎರಡು ವೀಡಿಯೊ ತುಣುಕುಗಳನ್ನು ಉದಾಹರಿಸಲಾಗಿದೆ. ಒಂದು ವೀಡಿಯೊದಲ್ಲಿ ಸೇನೆಯ ಅಧಿಕಾರಿಗಳು ಹಾಗೂ ಜವಾನರನ್ನು ಹಿಸ್ಸಾರ್‌ನ ಹನ್ಸಿ ಪಟ್ಟಣದ ಸ್ಥಳೀಯ ಪೊಲೀಸ್ ಅಧಿಕಾರಿಗಳು ದಿಕ್ಕು ತಪ್ಪಿಸಿದ್ದಾರೆ. ಸೇನಾಪಡೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್, ಗಲಭೆಕೋರರಿದ್ದ ಪ್ರದೇಶಕ್ಕೆ ತೆರಳುವ ಬದಲು ದಾರಿ ತಪ್ಪಿಸಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News