ಸೇನಾ ಗೋದಾಮಿಗೆ ಬೆಂಕಿ: 20 ಯೋಧರ ಸಜೀವ ದಹನ

Update: 2016-05-31 14:32 GMT

ನಾಗ್ಪುರ: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿರುವ ದೇಶದ ಅತಿದೊಡ್ಡ ಶಸ್ತ್ರ ಸಂಗ್ರಹಾಗಾರದಲ್ಲಿ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಸೇರಿದಂತೆ 20 ಮಂದಿ ಯೋಧರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಇತರ 19 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿಗೆ 110 ಕಿಲೋಮೀಟರ್ ದೂರದ ಪುಲ್ಗಾವ್ ಎಂಬಲ್ಲಿರುವ ಕೇಂದ್ರೀಯ ಶಸ್ತ್ರಾಸ್ತ್ರ ಗೋದಾಮಿನಲ್ಲಿ ರಾತ್ರಿ ವೇಳೆ ಬೆಂಕಿ ಹತ್ತಿಕೊಂಡು ಬಾನೆತ್ತರಕ್ಕೆ ದಟ್ಟಹೊಗೆ ವ್ಯಾಪಿಸಿದ ದೃಶ್ಯಾವಳಿಗಳು ಟೆಲಿವಿಷನ್ ವಾಹಿನಿಗಳಲ್ಲಿ ಬಿತ್ತರವಾಗಿವೆ. ಈ ಬೆಂಕಿಯಿಂದಾಗಿ ಭೀಕರ ಸ್ಫೋಟಗಳು ಸಂಭವಿಸಿದ್ದು, ಹತ್ತಿರದ ಮನೆಗಳಲ್ಲಿ ವಾಸವಿದ್ದ 1000ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಮೃತಪಟ್ಟ ಸೇನಾ ಅಧಿಕಾರಿಗಳೆಂದರೆ ಲೆಫ್ಟಿನೆಂಟ್ ಕರ್ನಲ್ ಆರ್.ಎಸ್.ಪವಾರ್ ಹಾಗೂ ಮೇಜರ್ ಕೆ.ಮನೋಜ್. ಮೃತಪಟ್ಟ ಹಾಗೂ ಗಾಯಗೊಂಡ ಸೈನಿಕರು ಪ್ರಮುಖ ರಕ್ಷಣಾ ನೆಲೆಗಳಲ್ಲಿ ನಿಯೋಜಿಸಲಾಗಿದ್ದ ರಕ್ಷಣಾ ಭದ್ರತಾ ಪಡೆಯ ಸೈನಿಕರು.

ಅನಧಿಕೃತ ಮೂಲಗಳ ಪ್ರಕಾರ, ಮುಂಜಾನೆ ಸುಮಾರು 1.30ರ ವೇಳೆಗೆ ವ್ಯಾಪಿಸಿದ ಬೆಂಕಿಯನ್ನು ಶಮನಗೊಳಿಸುವ ಪ್ರಯತ್ನದಲ್ಲಿದ್ದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಕೂಡಾ ಮೃತಪಟ್ಟಿದ್ದಾರೆ. ಕನಿಷ್ಠ 10 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಗೆ ಇಳಿದಿದ್ದವು.

ಎಲ್ಲ ಗಾಯಾಳುಗಳನ್ನು ಸಾವಂಗಿಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ.

ಒಂದು ಶೆಡ್‌ನಲ್ಲಿ ಹತ್ತಿಕೊಂಡ ಬೃಹತ್ ಪ್ರಮಾಣದ ಬೆಂಕಿಯನ್ನು ನಂದಿಸಲಾಗಿದೆ. ಇದೀಗ ಪರಿಸ್ಥಿತಿ ಸ್ಥಿರವಾಗುತ್ತಿದೆ ಎಂದು ಸೇನಾ ಅಧಿಕಾರಿ ಹೇಳಿದ್ದಾರೆ. ಹೆಚ್ಚುವರಿಯಾಗಿ ಬೆಂಕಿ ಅನಾಹುತ ಸಂಭವಿಸುವ ಅಥವಾ ಸ್ಫೋಟ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ವೇಳೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಸ್ಥಳಕ್ಕೆ ಭೇಟಿ ನಿಡುವ ಸಾಧ್ಯತೆ ಇದೆ.

ಈ ಅಪಾರ ಜೀವಹಾನಿ ಬಗ್ಗೆ ತೀವ್ರ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವುದಾಗಿ ಆ ಬಳಿಕ ಟ್ವೀಟ್ ಮಾಡಿದ್ದಾರೆ. ಈ ಘಟನೆಯಿಂದ ಅಪಾರ ಜೀವ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ನಮ್ಮ ಹಲವು ಮಂದಿ ಯೋಧರು ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಗೋದಾಮು ಎನಿಸಿದ ಪುಲಗಾಂವ್ ಗೊದಾಮಿನಲ್ಲಿ ಬಾಂಬ್, ಗ್ರೆನೇಡ್, ಶೆಲ್ ಹಾಗೂ ಇತರ ಸ್ಫೋಟಕಗಳನ್ನು ಸಂಗ್ರಹಿಸಲಾಗಿದೆ. ಫ್ಯಾಕ್ಟರಿಗಳಲ್ಲಿ ಸಿದ್ಧವಾಗುವ ಈ ಸ್ಫೋಟಕಗಳನ್ನು ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುವ ಮುನ್ನ ಇಲ್ಲಿ ಸಂಗ್ರಹಿಸಲಾಗುತ್ತದೆ. 2007ರಲ್ಲಿ ಜಮ್ಮು ಗೋದಾಮಿನಲ್ಲೂ ಇಂಥದ್ದೇ ಬೆಂಕಿ ಅನಾಹುತ ಸಂಭವಿಸಿತ್ತು. ಆಗ 17 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಸೇನೆಯ ಅತಿದೊಡ್ಡ ಗೋದಾಮುಗಳಲ್ಲೊಂದಾದ ಕೊಲ್ಕತ್ತಾ ಡಿಪೋದಲ್ಲೂ 2010ರಲ್ಲಿ ಬೆಂಕಿ ಅನಾಹುತ ಸಂಭವಿಸಿ, 150 ಟನ್ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳು ನಾಶವಾಗಿದ್ದವು. ಆದರೆ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News