ಪಾಕ್ ಬಾಲಕಿ ಮಶಾಲ್‌ಗೆ ಸುಷ್ಮಾ ಸಹಾಯ ಹಸ್ತ

Update: 2016-05-31 16:59 GMT

ಹೊಸದಿಲ್ಲಿ, ಮೇ 31: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನಿಂದ ಜೈಪುರಕ್ಕೆ ವಲಸೆ ಬಂದಿದ್ದ 19ರ ಯುವತಿ ಮಶಾಲ್ ಮಹೇಶ್ವರಿಗೆ ಕೊನೆಗೂ ಅದೃಷ್ಟದ ಬಾಗಿಲು ತೆರೆದಿದೆ. ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಧ್ಯಪ್ರವೇಶದಿಂದಾಗಿ ಆಕೆಗೆ ಇದೀಗ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುವ ಅವಕಾಶ ಲಭಿಸಿದೆ.

ಮಶಾಲ್ ತಂದೆ ಹಾಗೂ ತಾಯಿ ಇಬ್ಬರೂ ವೈದ್ಯರಾಗಿದ್ದು, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 91ರಷ್ಟು ಅಂಕ ಪಡೆದಿದ್ದಾರೆ. ಆದರೆ ಆಕೆಗೆ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಅನಿವಾಸಿ ಭಾರತೀಯರು ಹಾಗೂ ಭಾರತ ಮೂಲದವರಿಗಷ್ಟೇ ಈ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಆಕೆಯ ಕುಟುಂಬ ಕೇವಲ ದೀರ್ಘಾವಧಿ ವೀಸಾ ಮಾತ್ರ ಹೊಂದಿದೆ ಎಂಬ ಕಾರಣಕ್ಕೆ ಈಕೆಗೆ ಅವಕಾಶ ನಿರಾಕರಿಸಲಾಗಿತ್ತು. ಮಶಾಲ್ ಕಥೆ ಗಮನಕ್ಕೆ ಬಂದ ಬಳಿಕ ಸುಷ್ಮಾ ಮಧ್ಯಪ್ರವೇಶಿಸಿ, ಆಕೆಯ ಕನಸು ನನಸಾಗಿಸುವ ಭರವಸೆ ನೀಡಿದ್ದರು.

ಮಶಾಲ್, ಅಧೀರಳಾಬೇಡ ಮಗುವೇ; ನಾನು ವೈಯಕ್ತಿಕವಾಗಿ ನಿನ್ನ ಪ್ರಕರಣವನ್ನು ತೆಗೆದುಕೊಂಡು, ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವಂತೆ ಮಾಡುತ್ತೇನೆ ಎಂದು ಸುಷ್ಮಾ ರವಿವಾರ ಟ್ವೀಟ್ ಮಾಡಿದ್ದರು. ಸೋಮವಾರ ಮತ್ತೆ ಟ್ವೀಟ್ ಮಾಡಿ, ನಾನು ಸಿಎನ್‌ಎನ್ ನ್ಯೂಸ್ ನೋಡುತ್ತಿದ್ದೇನೆ. ನನ್ನ ದೂರವಾಣಿ ಸಂಖ್ಯೆ 011-23794344ಕ್ಕೆ ಕರೆ ಮಾಡು. ನಿನ್ನ ಕರೆಗೆ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ ದೂರವಾಣಿ ಸಂಬಾಷಣೆ ನಡೆದು, ಮಶಾಲ್ ಸರ್ಟಿಫಿಕೆಟ್‌ಗಳನ್ನು ಇ-ಮೇಲ್‌ನಲ್ಲಿ ತರಿಸಿಕೊಂಡು ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಶಿಕ್ಷಣಕ್ಕಾಗಿ ಮಗಳನ್ನು ಕರ್ನಾಟಕಕ್ಕೆ ಕಳುಹಿಸಲು ಪೋಷಕರು ನಿರಾಕರಿಸಿದ್ದಾರೆ. ಪ್ರದೇಶ ಹಾಗೂ ಭಾಷೆ ಸಂಪೂರ್ಣ ಬದಲಾಗುವುದರಿಂದ ಕರ್ನಾಟಕಕ್ಕೆ ಹೋಗಲು ಪೋಷಕರು ಒಪ್ಪುತ್ತಿಲ್ಲ. ಎರಡು ವರ್ಷಗಳಲ್ಲಿ ರಾಜಸ್ಥಾನದ ವಾತಾವರಣಕ್ಕೆ ಹೊಂದಿಕೊಂಡಿದ್ದೇವೆ ಎಂದು ಮಶಾಲ್ ಹೇಳುತ್ತಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News