ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರ: ಜೇಟ್ಲಿ ವಿಶ್ವಾಸ

Update: 2016-05-31 18:09 GMT

ಟೋಕಿಯೊ, ಮೇ 31: ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದೀಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆ ಆಂಗೀಕಾರವಾಗುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಕ್ಕೀ ಇನ್‌ಕಾರ್ಪೊರೇಷನ್ ಆಯೋಜಿಸಿದ್ದ ಏಷ್ಯಾದ ಭವಿಷ್ಯ ಎಂಬ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಮಸೂದೆಯನ್ನು ಲೋಕಸಭೆ ಈಗಾಗಲೇ ಅನುಮೋದಿಸಿದೆ. ಸರಕಾರಕ್ಕೆ ಬಹುಮತ ಇಲ್ಲದ ಮೇಲ್ಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗಬೇಕಿದೆ ಎಂದು ಹೇಳಿದರು.

ಆದರೆ ಹಲವು ರಾಜಕೀಯ ಪಕ್ಷಗಳು ಇದೀಗ ಮಸೂದೆಗೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ನಾನು ಆಶಾವಾದಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷವಾದ ಕಾಂಗ್ರೆಸ್ ಹೆಸರನ್ನು ಎಲ್ಲೂ ಪ್ರಸ್ತಾವಿಸದೇ, ಮಸೂದೆಯ ಕೆಲ ವಿಷಯಗಳ ಬಗ್ಗೆ ಒಂದು ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಅವರ ಜತೆ ಸಂವಾದಕ್ಕೆ ಮುಂದಾಗಿದ್ದೇವೆ. ಅವರನ್ನು ಸರಿದಾರಿಗೆ ತರುವ ವಿಶ್ವಾಸವಿದೆ ಎಂದು ಹೇಳಿದರು.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಜಿಎಸ್‌ಟಿ ತೆರಿಗೆ ದರವನ್ನು ಶೇ. 18ಕ್ಕೆ ಮಿತಿಗೊಳಿಸಬೇಕು ಎಂದು ಆಗ್ರಹಿಸುತ್ತಿದೆ. ಜತೆಗೆ ಅಂತರರಾಜ್ಯ ವಹಿವಾಟಿನ ಮೇಲೆ ವಿಧಿಸಲು ಉದ್ದೇಶಿಸಿರುವ ಶೇಕಡ ಒಂದರ ಲೆವಿಯನ್ನು ತೆಗೆದುಹಾಕಬೇಕು ಹಾಗೂ ರಾಜ್ಯಗಳಿಗೆ ಸ್ವತಂತ್ರ ವ್ಯಾಜ್ಯ ಪರಿಹಾರ ವ್ಯವಸ್ಥೆಯನ್ನು ರೂಪಿಸೇಕು ಎನ್ನುವುದು ಕಾಂಗ್ರೆಸ್ ಆಗ್ರಹವಾಗಿದೆ.

2006ರಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಜಿಎಸ್‌ಟಿ ಪ್ರಸ್ತಾವಿಸಿತ್ತು. ದೇಶದ ಎಲ್ಲ 29 ರಾಜ್ಯಗಳನ್ನು ಏಕರೂಪದ ಮಾರುಕಟ್ಟೆಯಾಗಿ ಪರಿವರ್ತಿಸುವ ಈ ಮಸೂದೆಗೆ ಕಳೆದ ವರ್ಷದ ಏಪ್ರಿಲ್‌ನಲ್ಲೇ ಅನುಮೋದನೆ ಪಡೆಯಲು ಎನ್‌ಡಿಎ ಸರಕಾರ ಉದ್ದೇಶಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರಕದೇ ಇದ್ದುದರಿಂದ ಇದು ಸಾಧ್ಯವಾಗಿರಲಿಲ್ಲ.

ದೇಶದಲ್ಲಿ ಸುಧಾರಣೆ ಪರ್ವ ನಿರಂತರ ಪ್ರಕ್ರಿಯೆ ಎಂದು ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News