ಅಮಾಯಕ ಮುಸ್ಲಿಮರ ವಿರುದ್ಧ ಭಯೋತ್ಪಾದನೆಯ ಸುಳ್ಳಾರೋಪ ಚಿಂತೆಯ ವಿಷಯ : ಕಾನೂನು ಸಚಿವ ಡಿವಿಎಸ್‌

Update: 2016-06-01 07:29 GMT

ಅಲಿಘಡ, ಜೂ.1: ಭಯೋತ್ಪಾದನೆಯ  ಆರೋಪದಲ್ಲಿ ದೇಶಾದ್ಯಂತ ಅಮಾಯಕ ಮುಸ್ಲಿಂ ಯುವಕರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗಿ, ಬಳಿಕ ಸಾಕ್ಷ್ಯಾಧರಗಳ ಕೊರತೆಯಿಂದ ಅವರ ಮೇಲಿನ ಆರೋಪ ವಜಾಗೊಳ್ಳುತ್ತಿದೆ. ಇದು ಚಿಂತೆಯ ವಿಷಯವಾಗಿದೆ. ಅಮಾಯಕ ಮುಸ್ಲಿಂ ಯುವಕರ ಭವಿಷ್ಯಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಡಿ.ವಿ. ಸದಾನಂದ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಅಲಿಘಡ್‌ನಲ್ಲಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡು ವರ್ಷಗಳ ಸಾಧನೆಯ ಸಮಾವೇಶ ’ವಿಕಾಸ ಪರ್ವ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಿ.ವಿ.ಸದಾನಂದ ಗೌಡ ಅಮಾಯಕ ಮುಸ್ಲಿಂ ಯುವಕರು ಈ ರೀತಿ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಈಗಿರುವ ಕಾನೂನಿನಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾನೂನು ಆಯೋಗವು ಈ ವಿಚಾರಕ್ಕೆ ಸಂಬಂಧಿಸಿದ ವರದಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಪರಾಧ ದಂಡ ಸಂಹಿತೆ ,ಜಾಮೀನು, ಪ್ರಾಸಿಕ್ಯೂಶನ್‌ ಲ್ಯಾಪ್ಸಸ್‌  ಮತ್ತಿತರ ವಿಚಾರಗಳ ಬಗ್ಗೆ ಸುಧಾರಣೆ ತರಲಾಗುವುದು ಎಂದು ತಿಳಿಸಿದ ಸಚಿವ ಡಿವಿಎಸ್ ಸುಪ್ರೀಂ ಕೋರ್ಟ್‌‌ನ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯು ಈ ಬಗ್ಗೆ ವರದಿ ತಯಾರಿಸುತ್ತಿದ್ದು, ಕಾನೂನು ತಜ್ಞರು ವರದಿ ಸಿದ್ದಪಡಿಸಲು ನೆರವು ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News