ದ್ವೇಷವೆಂಬ ಕಳೆಯ ಬೀಜಗಳು

Update: 2016-06-02 09:32 GMT

‘‘ನಾಕರಿಯಳೆಂದು ನೀ ಜರಿಯಬೇಡ ಬಿಳಿಗೆಳತಿ ಗರ್ವದಿಂದ’’ ಎಂದು ಆರಂಭವಾಗುವ ಪದ್ಯವೊಂದಿತ್ತು. ಇದು ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ಬಿಳಿಯರು ಕರಿಯರನ್ನು ಹೀಗಳೆಯುವ, ಗುಲಾಮರಂತೆ ಅಥವ ಕನಿಷ್ಠರಂತೆ ಕಾಣುವ ಕಾಲದ ಕುರಿತ ಕಾವ್ಯೋಪಖ್ಯಾನ. ವಿಶ್ವದಲ್ಲೆಡೆ ಬಿಳಿಯರು ಇತರರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಂಡದ್ದೇ ಹೆಚ್ಚು. ಬಿಳಿಯರ ವ್ಯಾಪಾರೀ ಮನೋಭಾವವು ವಸಾಹತುಶಾಹಿತ್ವದ ನಂತರದ ಕಾಲದಲ್ಲಿ ಅನಿವಾರ್ಯವಾಗಿ ಈ ವರ್ಣದ್ವೇಷದ ಮೇಲುಕೀಳು ಪ್ರವೃತ್ತಿ ಕಡಿಮೆಯಾಗುತ್ತಿದ್ದರೂ ಈಗಲೂ ಈ ದೃಷ್ಟಿಕೋನ ಪೂರ್ಣ ಬದಲಾದಂತಿಲ್ಲ. ವಿಶ್ವದ ಹಿರಿಯಣ್ಣ ಅಮೆರಿಕದಲ್ಲಿ ಮತ್ತು ಆಫ್ರಿಕಾ ಭೂಖಂಡದಲ್ಲಿ ನೀಗ್ರೋಗಳು ಮತ್ತು ಇತರ ಐರೋಪ್ಯ ದೇಶಗಳಲ್ಲಿ ಏಷ್ಯನರು ಈ ಅಮಾನವೀಯ ರೀತಿ-ನೀತಿಗೆ ಬಲಿಯಾಗುತ್ತಲೇ ಇದ್ದಾರೆ. ಮಹಾತ್ಮಾ ಗಾಂಧಿ ವರ್ಣದ್ವೇಷದ ಬಿಸಿಯನ್ನು ತೀವ್ರವಾಗಿ ಅನುಭವಿ ಸಿದ್ದು ಆಫ್ರಿಕಾದಲ್ಲಿ. ಅವರು ಪ್ರತಿಭಟಿಸಿದರು ಮತ್ತು ಭಾಗಶಃ ಯಶಸ್ಸನ್ನು ಗಳಿಸಿದರು. ಅವರು ಮುಂದುವರಿದಿದ್ದರೆ ಆಫ್ರಿಕಾ ಮತ್ತು ಭಾರತದ ಇತಿಹಾಸ ಹೇಗೆ ಪಲ್ಲಟವಾಗುತ್ತಿತ್ತೋ ಗೊತ್ತಿಲ್ಲ. ಆದರೆ ಅವರು ಅನಂತರ ಭಾರತಕ್ಕೆ ಬಂದು ಸ್ವಾತಂತ್ರ್ಯ ಹೋರಾಟದ ಮುಂದಾಳತ್ವವನ್ನು ವಹಿಸಿದರು. ಮುಂದಿನದ್ದು ಇತಿಹಾಸ. (ಆಫ್ರಿಕಾದಲ್ಲಿ ಮುಂದೆ ನೆಲ್ಸನ್ ಮಂಡೇಲಾ ಈ ಹೋರಾಟವನ್ನು ಮುಂದುವರಿಸಿದರು. 26 ವರ್ಷ ಸೆರೆವಾಸ ಮತ್ತು ಪಡಬಾರದ ಯಾತನೆಯನ್ನು ಅನುಭವಿಸಿ ನಂತರ ಅಧ್ಯಕ್ಷಗಿರಿಯನ್ನೇರಿದರು. ಹೊಸದೊಂದು ಇತಿಹಾಸ ನಿರ್ಮಿಸಿದರು.)

ವರ್ಣದ್ವೇಷವೆನ್ನುವುದು ಖಂಡಾಂತರ ಪಯಣಗಳಿಗೆ ಎಡೆಮಾಡಿಕೊಟ್ಟದ್ದನ್ನೂ ಚರಿತ್ರೆಯ ಪುಟಗಳಲ್ಲಿ ಕಾಣುತ್ತೇವೆ. ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ವಿ.ಎಸ್. ನೈಪಾಲ್ ಅವರ ಪೂರ್ವಜರು ಭಾರತದಿಂದ ವೆಸ್ಟ್ ಇಂಡೀಸ್ ದ್ವೀಪಗಳಿಗೆ ರಬ್ಬರ್ ತೋಟಗಳಲ್ಲಿ ಕೆಲಸಮಾಡಲು ಗುಲಾಮರಾಗಿ ಒಯ್ಯಲ್ಪಟ್ಟರಂತೆ. ಇಂತಹ ನೂರಾರು ಉದಾಹರಣೆಗಳಿವೆ. ಒಟ್ಟಿನಲ್ಲಿ ಚರಿತ್ರೆಯ ಭಯಾನಕ ಪುಟಗಳಲ್ಲಿ ವರ್ಣದ್ವೇಷವೂ ಒಂದು. ಇವೆಲ್ಲ ಕಣ್ಣೆದುರಿದ್ದರೂ ಇಂದೂ ಜನಾಂಗೀಯ ಕಲಹ ನಡೆಯುತ್ತಿದೆ. ದಿಲ್ಲಿಯಲ್ಲಿ ಇತ್ತೀಚೆಗೆ ಕಾಂಗೋವಿನ ವಿದ್ಯಾರ್ಥಿಯೊಬ್ಬ ಭಾರತೀಯರಿಂದ ಹತನಾದ; ಇದಕ್ಕೆ ಪ್ರತೀಕಾರವಾಗಿ ಆಫ್ರಿಕಾದಲ್ಲಿ ಭಾರತೀಯರ ಮೇಲೆ ಹಲ್ಲೆಗಳಾಗಿವೆ. ಅನಂತರದ ದಿನಗಳಲ್ಲಿ ಆಫ್ರಿಕನರ ವಿರುದ್ಧ ಭಾರತೀಯರು ಹಲ್ಲೆ ಮಾಡಿದ ವರದಿಗಳೂ ಬಂದಿವೆ. ಇವು ಜನಾಂಗೀಯವಲ್ಲವೆಂದೂ ಚಿಕ್ಕಘಟನೆಗಳನ್ನು ಮಾಧ್ಯಮಗಳು ದೊಡ್ಡದಾಗಿ ಪ್ರಚಾರ ಮಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿವೆಯೆಂದು ಸರಕಾರವು ಹೇಳಿಕೊಳ್ಳುತ್ತಿದ್ದರೂ ಇಂತಹ ಹಲ್ಲೆಗಳಲ್ಲಿ ಇಲ್ಲಿ ನಿಮಗೇನು ಕೆಲಸ ಎಂಬ ಮನಸ್ಥಿತಿಯು ಕೆಲಸಮಾಡುತ್ತದೆಯೆಂಬುದು ಸ್ಪಷ್ಟವಾಗುತ್ತದೆ. (ಇಲ್ಲೂ ರಾಜಕೀಯ ಕೆಲಸಮಾಡಿದೆ. ಈ ಹಲ್ಲೆಗಳ ಬಗ್ಗೆ ವಿದೇಶಾಂಗ ಸಚಿವರು ಚರ್ಚಿಸಿದ್ದು ಕೇಂದ್ರ ಗೃಹಸಚಿವರು ಮತ್ತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ. ದಿಲ್ಲಿಯ ಮುಖ್ಯ ಮಂತ್ರಿಗಳೊಂದಿಗಲ್ಲ!) ಸರಕಾರವೂ ಆಫ್ರಿಕಾ ದೇಶಗಳನ್ನು ಸಮಾಧಾನಪಡಿಸಲು ಕ್ರಮಗಳನ್ನು ಕೈಗೊಂಡರೂ ಅದೊಂದು ಕಣ್ಣೊರೆಸುವ ತಂತ್ರದಂತಿದ್ದು ಅವನ್ನು ನಂಬದ ಸಂಬಂಧಿತ ದೇಶಗಳು ಪ್ರತಿಭಟಿಸಿವೆ. ಇದು ನನ್ನ ದೇಶ ಎಂಬ ಪ್ರೀತಿಯಿರಲಿ; ಈ ದೇಶ ನನ್ನದು ಎಂಬಾಗ ಇಲ್ಲಿ ನಿನಗೇನು ಹಕ್ಕು ಎಂಬ ಪ್ರಶ್ನೆ ಬಾರದಿರಲಿ. ನಮ್ಮ ಸರಕಾರ, ನಮ್ಮ ರಾಜಕಾರಣಿಗಳು ತಮ್ಮ ತಮ್ಮ ಬೆಂಬಲಿಗರನ್ನು ಉತ್ಸಾಹಿತರನ್ನಾಗಿ ಮಾಡುವ ಉದ್ದೇಶದಿಂದ ಅನೇಕ ಬಾರಿ ಹೊಣೆರಹಿತ ಮಾತುಗಳನ್ನಾಡುತ್ತಾರೆ. ಇದರಿಂದಾಗಿ ಸಮಾಜವು ಆತಂಕಗಳನ್ನು ಎದುರಿಸುವುದು ಮಾತ್ರವಲ್ಲ, ಎಲ್ಲ ಹಂತಗಳಲ್ಲೂ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ದೇಶೀಯತೆಯಾಗಲೀ ರಾಷ್ಟ್ರೀಯತೆಯಾಗಲೀ ಜನಾಂಗಾಧರಿತವಾದರೆ ಅದು ಇತರರನ್ನು (ಅಂದರೆ ವ್ಯಾಖ್ಯಾನಕ್ಕೊಳಪಡುವ ಜಾತಿ-ಜನಾಂಗವನ್ನು ಹೊರತುಪಡಿಸಿದಂತೆ ಇತರ ದೇಶಿ-ಪರದೇಶಿಯರನ್ನು, ಜನಾಂಗಗಳನ್ನು) ಪರಕೀಯರೆಂಬಂತೆ ಪ್ರತಿಬಿಂಬಿಸುತ್ತದೆ. ಇದು ನಮ್ಮದು, ನೀವಿಲ್ಲಿ ಪರಕೀಯರು, ಆದ್ದರಿಂದ ನೀವು ನಾವು ಹೇಳಿದಂತಿರಬೇಕು ಎಂಬ ಮೇಲುತನವನ್ನು ಪ್ರತಿಪಾದಿಸುತ್ತದೆ. ಮೇಲಂತಸ್ತಿನ ಮತ್ತು ಕೆಳ ಅಂತಸ್ತಿನ ಎರಡು ರೀತಿಯ ಸಮಾಜಗಳನ್ನು ಸೃಷ್ಟಿಸುತ್ತದೆ. (ಕೆಳ ಅಂತಸ್ತಿನ ಸಮಾಜವು ಭೂಮಿಗೆ, ನೆಲಕ್ಕೆ, ಮಣ್ಣಿಗೆ ಹತ್ತಿರವಿರುತ್ತದೆ- ಆ ವಿಷಯ ಪ್ರತ್ಯೇಕ.)

ಇಂತಹ ತಾರತಮ್ಯವು ಆರ್ಥಿಕ ಇಲ್ಲವೇ ಅಧಿಕಾರ ರಾಜಕೀಯ ಉದ್ದೇಶದಿಂದ ಕೂಡಿರುತ್ತದೆ. ಅಮೆರಿಕ ಮತ್ತು ಯುರೋಪಿನ ಹಾಗೂ ಆಫ್ರಿಕಾ ಭೂಖಂಡದ ಅನೇಕ ರಾಷ್ಟ್ರಗಳು ಆರ್ಥಿಕ ಅಭಿವೃದ್ಧಿಗಾಗಿ ಇಂತಹ ವ್ಯತ್ಯಾಸಗಳನ್ನು ಕಾಪಾಡಿಕೊಂಡು ಬಂದರೆ, ಜರ್ಮನಿಯು ಹಿಟ್ಲರನ ಕಾಲದಲ್ಲಿ ಅಧಿಕಾರ ರಾಜಕೀಯ ಉದ್ದೇಶಕ್ಕಾಗಿ ಯಹೂದಿಗಳನ್ನು ತುಳಿಯಿತು. ಇವೆಲ್ಲದರಲ್ಲಿರುವ ಸಾಮ್ಯವೆಂದರೆ ಹಿಂಸೆ. ಹಿಂಸೆ ನೀಡುವವನಿಗೆ ಹಿಂಸೆ ಅನುಭವಿಸಿ ಗೊತ್ತಿರುವುದಿಲ್ಲ. ಅವಮಾನಿಸುವವನಿಗೆ ಅವಮಾನದ ನೋವು ಗೊತ್ತಿರುವುದಿಲ್ಲ. ಮಧ್ಯಕಾಲೀನ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಇಂತಹ ವ್ಯತ್ಯಾಸವನ್ನು ಸೃಷ್ಟಿಸಲಾಗಿತ್ತು. ವೌಢ್ಯ ಪರಂಪರೆಯನ್ನು ಬಲವಂತವಾಗಿ ಹೇರಲಾಗುತ್ತಿತ್ತು. ಇಂತಹ ಸಂದಭರ್ದಲ್ಲಿ ರಾಷ್ಟ್ರೀಯತೆಯ ನೆಪದಲ್ಲಿ ಯಾರೇ ಆಗಲಿ ನಾವು ಇತರರಿಗಿಂತ ಮೇಲು ಮತ್ತು ಇತರರು ನಮಗಿಂತ ಕೀಳು, ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಸ್ವಕೀಯರು, ಇತರರು ಪರಕೀಯರು ಎಂದು ಭಾವಿಸುವುದು ಅಮಾನವೀಯತೆಯ ದ್ಯೋತಕವಾಗುತ್ತದೆ. ಇಲ್ಲಿ ಈ ಇತರರು ಎಂದು ವ್ಯಾಖ್ಯಾನಿಸುವುದು ಮೇಲ್ತನವನ್ನು ತನ್ನಲ್ಲಿ ಗುರುತಿಸುವ ವ್ಯಕ್ತಿ ಇಲ್ಲವೇ ಗುಂಪಾಗಿರುವುದರಿಂದ ಅದಕ್ಕೆ ಯಾವ ತರ್ಕವೂ ಮಾನ್ಯವಾಗುವುದಿಲ್ಲ. ಉದಾಹರಣೆಗೆ ಬ್ರಾಹ್ಮಣನೊಬ್ಬ ತಾನು ವರ್ಣಾಶ್ರಮ ಧರ್ಮದಲ್ಲಿ ಮೊದಲನೆ ಪಂಕ್ತಿಗೆ ಸೇರಿದವನು, ಹಾಗೂ ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಪರಂಪರೆಯಲ್ಲಿ ಗುರುತಿಸುವ ಪಂಗಡಗಳು ತನಗಿಂತ ಕೀಳು ಎಂದು ಭಾವಿಸಿದರೆ ಆತನಿಗೆ ವಾಸ್ತವದ ಮತ್ತು ಆಧುನಿಕತೆಯ ಪ್ರಜ್ಞೆಯ ಅರಿವಿಲ್ಲ ಎಂದರ್ಥ. ವರ್ಣಾಶ್ರಮ ಧರ್ಮವೆಂಬುದೊಂದಿದ್ದರೆ ಅದು ತನ್ನ ಅಗತ್ಯಗಳನ್ನು ಎಂದೋ ಪೂರೈಸಿ ಈಗ ನಿರುಪಯುಕ್ತ ಮತ್ತು ಪ್ರಗತಿಗೆ ಮಾರಕ ಎಂದೇ ಯೋಚಿಸಬೇಕು. ಅದು ದೇಶ-ಕಾಲ-ಧರ್ಮಪೂರಕ. ಧರ್ಮ ಶಾಂತಿಯ ನೆಲೆಮನೆಯಾಗದೆಂದು ಇಂದು ಎಲ್ಲ ಧರ್ಮಗಳೂ ತೋರಿಸಿ ಕೊಟ್ಟಿವೆ. ಕ್ರೈಸ್ತ-ಇಸ್ಲಾಂ ಧರ್ಮದ ಬುನಾದಿಯ ಮೇಲೆ ಕಟ್ಟಿದ ದೇಶಗಳೂ ಇಂದು ಸಾಂಘಿಕ ಹಿಂಸೆಯ ಬೆಂಕಿಯಲ್ಲಿ ಸುಡುತ್ತಿವೆ. ಬೌದ್ಧ ಧರ್ಮವನ್ನೇ ಅನುಸರಿಸುತ್ತಿರುವ ದೇಶಗಳ ಇತಿಹಾಸವೂ ಹಿಂಸೆ, ಕ್ರೌರ್ಯದಿಂದ ದೂರವಾಗಿಲ್ಲ. ಇನ್ನೂ ಮುಖ್ಯವಾದ್ದೆಂದರೆ ಜಾತಿಯನ್ನು ಧರ್ಮವೂ, ಧರ್ಮವನ್ನು ದೇವರೂ ಅವಲಂಬಿಸಿರುತ್ತದೆ. (ಇದನ್ನು ತಿರುಗಾ ಮುರುಗಾ ಇಟ್ಟರೂ ಅಷ್ಟೇ: ದೇವರನ್ನು ಧರ್ಮವೂ, ಧರ್ಮವನ್ನು ಜಾತಿಯೂ ಅವಲಂಬಿಸಿರುತ್ತದೆ!) ಇಂತಹ ಪರಸ್ಪರಾವಲಂಬನದ ಕೆಡುಕುಗಳು ಬಹುತೇಕ ಹಿಂಸಾತ್ಮಕವಾಗಿರುತ್ತವೆ.

ಇದು ವರ್ಣದ, ಧರ್ಮದ, ಜನಾಂಗದ ಜಾಗತಿಕ ದುಸ್ಥಿತಿಯಾದರೆ ಭಾರತಕ್ಕೇ ವಿಶಿಷ್ಟವಾಗಿರುವ ಜಾತಿಯ ಪರಿಸ್ಥಿತಿಯೂ ಶೋಚನೀಯ. ಭಾರತದ ಜಾತಿವ್ಯವಸ್ಥೆಯಲ್ಲಿ ಅಸ್ಪಶ್ಯತೆ ಒಂದು ವಿಕೃತಿ. ಇಲ್ಲೂ ಬಿಳಿ-ಕಪ್ಪುಕೆಲಸಮಾಡಿದೆ. ಈ ಜಾತಿ ವ್ಯವಸ್ಥೆಯು ಮತ್ತು ಅದರ ಮೂರ್ತ ಸ್ವರೂಪಗಳು ಹಿಂದೂ ಜೀವನ ಪದ್ದತಿಯ ಗಂಡಾಂತರಗಳು. ಭಾರತದಲ್ಲೂ ಸತಿ ಸಹಗಮನ, ಬಾಲ್ಯ ವಿವಾಹ, ಗುಲಾಮಗಿರಿ ಮುಂತಾದ ಮೂಢನಂಬಿಕೆಗಳನ್ನು ಹೇರಳವಾಗಿ ಅನುಕರಿಸಲಾಗುತ್ತಿತ್ತು. ಭಾರತದ ಲಾಕ್ಷಣಿಕ ಗ್ರಂಥಗಳು ಮಾತಿನಲ್ಲಿ, ಘೋಷಣೆಗಳಲ್ಲಿ ಹೇಳಿದ ತಿಲದಷ್ಟೂ ಕ್ರಿಯೆಯಲ್ಲಿ ಫಲ ನೀಡಿರಲಿಲ್ಲ. ಮಹಿಳೆಯರಿಗೆ ಗೌರವ ನೀಡಬೇಕೆಂಬುದು ಮಂತ್ರ-ಶ್ಲೋಕಗಳಲ್ಲಿದ್ದವೇ ಹೊರತು ಇನ್ನೆಲ್ಲ ಕಾರ್ಯಗಳಲ್ಲೂ ಅವರು ಊಳಿಗದವರೇ ಆಗಿದ್ದರು. ರಾಜಾರಾಮ ಮೋಹನ ರಾಯ್ ಮುಂತಾದ ಸಮಾಜ ಸುಧಾರಕರು ಇವನ್ನು ಹೋಗಲಾಡಿಸಲು ದುಡಿದರು. ಗಾಂಧಿ ತಾನೇಕೆ ಹಿಂದೂ ಎಂದು ಎಷ್ಟು ಪ್ರಶ್ನೆಗಳನ್ನು ಹಾಕಿಕೊಂಡರೂ ಅವರ ವ್ಯಾಖ್ಯಾನವು ಅನೇಕ ಅರ್ಥ-ಅಪಾರ್ಥಗಳನ್ನು ಸ್ಫುರಿಸುವಂಥದ್ದು. ಈ ದೃಷ್ಟಿಯಿಂದ ಅಂಬೇಡ್ಕರ್ ಹೆಚ್ಚು ಖಚಿತತೆಯಿಂದ ಮಾತನಾಡಿದರು; ಬರೆದರು. ಅಂಬೇಡ್ಕರ್ ದಲಿತರನ್ನೂ ಮನುಷ್ಯರಂತೆ ಕಾಣಬೇಕಾದ ಅವಶ್ಯಕತೆಯನ್ನು ಹೇಳಿದರು. ಇಂತಹ ಎಲ್ಲ ಪ್ರಯತ್ನಗಳು ಸಾಕಷ್ಟು ಪ್ರತಿರೋಧವನ್ನು ಎದುರಿಸಿದರೂ ಒಂದಷ್ಟು ಯಶಸ್ಸನ್ನು ಗಳಿಸಿದವು. ಇಂದು ಸಮಾಜವು ಸಮಾನವಾಗುವತ್ತ ದಾಪುಗಾಲನ್ನಿಡುತ್ತಿದ್ದರೂ ನಡೆದದ್ದಕ್ಕಿಂತ ಕ್ರಮಿಸಲಿರುವ ಹಾದಿಯೇ ಹೆಚ್ಚಿದೆ. ಭಾರತದ ಪರಿಸ್ಥಿತಿಯಲ್ಲಿ ವರ್ಣದಿಂದ ವಿಕಾಸಗೊಂಡ ಜಾತಿಯೆಂಬ ವ್ಯವಸ್ಥೆಯು ಎಷ್ಟು ವಿನಾಶಕಾರೀ ಪ್ರವೃತ್ತಿಯದೆಂದು ಗೊತ್ತಾಗಬೇಕಾದರೆ ನಮ್ಮ ನಮ್ಮ ಧರ್ಮ-ದೇವರ ಹೆಸರಿನಲ್ಲಿ ನಡೆಯುವ ಕಲಹಗಳನ್ನು ಗಮನಿಸಬೇಕು. ಈ ಸಂಘರ್ಷವು ಆಸ್ತಿಕ-ನಾಸ್ತಿಕ ಎಂಬುದಕ್ಕಿಂತಲೂ ಹೆಚ್ಚಿರುತ್ತದೆ. ನಮ್ಮ ಪ್ರತಿಷ್ಠಿತ ಸಾಧು-ಸಂತರು ಯಾವನೇ ರಾಜಕಾರಣಿ, ಕೈಗಾರಿಕೋದ್ಯಮಿಗಿಂತ ವ್ಯವಹಾರದಲ್ಲಿ ಭಿನ್ನರಾಗಿಲ್ಲ. ಜಾತಿಯೆಂಬುದು ಮನೆಯೊಳಗಿನ ಮರ್ಯಾದೆಯೇ ಹೊರತು ಬಹಿರಂಗ ಪ್ರದರ್ಶನದ ಸರಕಲ್ಲ. ಆದರೆ ಪರಸ್ಪರರನ್ನು ಎತ್ತಿಕಟ್ಟಿ ಚಂದ ನೋಡುವುದರಲ್ಲಿ ಸಮಾಜದ ನೇತಾರರು ಮಗ್ನರಾಗಿ ತಕ್ಕ ಮಟ್ಟಿನ ಗೆಲುವನ್ನೂ ಸಾಧಿಸಿದ್ದಾರೆ; ಜಾತಿಧರ್ಮಗಳ ವ್ಯೆಹವನ್ನು ಸೃಷ್ಟಿಸಿಕೊಂಡು ಬಲಿಪಶುಗಳನ್ನು ಕಾದುಕೊಂಡಿರುತ್ತಾರೆ. ಇಂದು ಭಾರತದಲ್ಲಿ ಎಷ್ಟೇ ಸುಧಾರಿತ ವಿದ್ಯಾವಂತನಾದರೂ ತನಗಿಂತ ಕಡಿಮೆ ಯೋಗ್ಯತೆಯ ಕಾವಿ-ಖಾದಿಗಳೆದುರು ತಲೆಬಾಗುತ್ತಾನೆ. ಪ್ರಶ್ನಿಸಿದರೆ ಸಮಾಜದ ವ್ಯವಸ್ಥೆಯೇ ಹಾಗೆ ಎಂದುಕೊಳ್ಳುತ್ತಾನೆ. ಜಾತಿ-ವರ್ಣಗಳ ಮಾತ್ರವಲ್ಲ ಆರ್ಥಿಕ ಅಸಮತೋಲನಗಳನ್ನು ಹೋಗಲಾಡಿಸುವತ್ತ ಗಾಂಧಿ, ಅಂಬೇಡ್ಕರ್ ಮುಂತಾದ ಧೀಮಂತರು ಮಾಡಿದ ಯತ್ನಗಳನ್ನು ಪರೋಕ್ಷವಾಗಿ ಅಲ್ಲಗಳೆದು ಹೊಸ ವಿಕಾರದ ಸಮಾಜವನ್ನು ಕಟ್ಟುವ ಯತ್ನವು ನಡೆಯುತ್ತಿದೆ. ಸಾಮ್ರಾಜ್ಯಶಾಹಿ ಮತ್ತು ಅಧಿಕಾರಶಾಹಿ ಜನರು ಒಂದೆಡೆ ಇಡೀ ವಿಶ್ವವನ್ನು ಒಲಿಸಿಕೊಳ್ಳುವ ಮಾತನಾಡುತ್ತಲೇ ಇನ್ನೊಂದೆಡೆ ಸುಳ್ಳು ಸ್ವಾಭಿಮಾನದ ಮುಖವಾಡವನ್ನು ಧರಿಸಿ ಇತರರನ್ನು ಬೆದರಿಸುವ ಹೆಜ್ಜೆಗಳೂ ಕಾಣಿಸುತ್ತಿವೆ. ಯಾವ ಬಗೆಯ ಹಲ್ಲೆ-ಹತ್ಯೆಗಳೇ ನಡೆಯಲಿ, ಅವನ್ನು ಒಂದು ಸಿದ್ಧಾಂತಕ್ಕೊಳಪಡಿಸಿ ಸಮರ್ಥಿಸುವ ಕಾರ್ಯವೂ ನಡೆಯುತ್ತಿದೆ. ಮಾನಗೇಡಿ ಕೃತ್ಯಗಳು ಮರ್ಯಾದಾ ಕೃತ್ಯಗಳಾಗುತ್ತಿವೆ. ಜನರೂ ಅವಕಾಶವಾದಿಗಳಾಗುತ್ತ, ಗಾಳಿ ಬೀಸುವ ಕಡೆಗೆ ತೂರಿಕೊಳ್ಳುತ್ತಲೇ ಇದ್ದಾರೆ. ವಸುಧೈವ ಕುಟುಂಬಕಂ ಎನ್ನುತ್ತಲೇ ನಾವು ಮಾಡುವ ದುಷ್ಕೃತ್ಯಗಳು ಜಗತ್ತಿನ ಇನ್ನೊಂದೆಡೆ ನೆಲೆಸಿರುವ ಭಾರತೀಯರಿಗೆ ತೊಂದರೆ ಮಾಡಬಹುದೆಂಬ ಪ್ರಜ್ಞೆಯನ್ನೇ ಕಳೆದುಕೊಳ್ಳುತಿದ್ದೇವೆ. ಇಷ್ಟೇ ಅಲ್ಲ, ರಾಜ್ಯ-ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯದಲ್ಲಿ ಅನ್ಯ ರಾಜ್ಯದ ಅಮಾಯಕ ನೆಲೆಸಿಗರು ತೊಂದರೆಯನ್ನು ಅನುಭವಿಸುತ್ತಾರೆ. ಇದೊಂದು ಸರಪಳಿ(ಪ್ರತಿ)ಕ್ರಿಯೆ. ಇದಕ್ಕೆ ಕೊನೆಯೇ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ದ್ವೇಷವನ್ನು ಪ್ರೇರೇಪಿಸುವ ಎಲ್ಲ ಬೆಳೆಗಳನ್ನು ಕಳೆಗಳಂತೆ ನಾಶಮಾಡುವ ಅಗತ್ಯವಿದೆ. ಈ ಹುಳುಕುಗಳೆಲ್ಲ ಪಕ್ಷನಿಷ್ಠವಾಗಿ, ಜಾತಿನಿಷ್ಠವಾಗಿ, ರಾಷ್ಟ್ರನಿಷ್ಠವಾಗಿ ಕೆಲಸಮಾಡುವುದನ್ನು ಸಂವೇದನಾಶೀಲರು, ಪ್ರಾಜ್ಞರು ಗಮನಿಸಬೇಕು; ಸಂದೇಹಿಸಬೇಕು. ಇಡೀ ಸಮಾಜವೇ ದಾರಿತಪ್ಪಿದರೂ ಸರಿಯೆಂದು ಗೋಚರಿಸುವ ಹಾದಿಯನ್ನು ಕ್ರಮಿಸಬೇಕು. ಎಲ್ಲ ದಾರ್ಶನಿಕರೂ ಹೀಗೆಯೇ: ತಮ್ಮ ಕಾಲದಲ್ಲಿ, ದೇಶದಲ್ಲಿ ಸಾಮಾಜಿಕ ವ್ತ್ಯತ್ಯಸ್ತತೆಗೆ ಬಲಿಯಾದರೂ ಭವಿಷ್ಯದಲ್ಲಿ ಮನುಷ್ಯಕುಲದ ಇತಿಹಾಸದಲ್ಲಿ ತಾರೆಗಳಂತೆ ಗೋಚರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News