ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಲ್ಲಿಲ್ಲದ ಹುಲಿ

Update: 2016-06-02 04:31 GMT

ಹೊಸದಿಲಿ, ಜೂ.2: ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಲ್ಲಿಲ್ಲದ ಹುಲಿ. ಮಾನವಹಕ್ಕು ಉಲ್ಲಂಘನೆ ಪ್ರಕರಣಗಳಲ್ಲಿ ರಾಷ್ಟ್ರೀಯ ಮಾನವಹಕ್ಕು ಆಯೋಗದ ಆದೇಶಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆಯೋಗಕ್ಕೆ ಹಲ್ಲು ನೀಡುವ ಕಾರ್ಯ ಆಗಬೇಕಿದೆ ಎಂದು ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್.ದತ್ತು ಹೇಳಿದ್ದಾರೆ.
"ಎನ್‌ಎಚ್‌ಆರ್‌ಸಿ ಹಲ್ಲಿಲ್ಲದ ಹುಲಿ. ನಾವು ತೀವ್ರ ಪರಿಶ್ರಮದಿಂದ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳನ್ನು ತನಿಖೆ ಮಾಡುತ್ತೇವೆ. ನಮ್ಮ ಸೀಮಿತ ಸಂಪನ್ಮೂಲ ಬಳಸಿಕೊಂಡು ತೀರಾ ಗುಡ್ಡಗಾಡು ಪ್ರದೇಶಗಳಿಗೂ ತೆರಳುತ್ತೇವೆ. ಪಡೆದ ಪುರಾವೆಗಳನ್ನು ನಿವೃತ್ತ ನ್ಯಾಯಮೂರ್ತಿಗಳು ಸದಸ್ಯರಾಗಿರುವ ಫೊರೆನ್ಸಿಕ್ ಜ್ಯುಡಿಶಿಯಲ್ ಎಡ್ಜುಡಿಕೇಶನ್ ವ್ಯವಸ್ಥೆಗೆ ನೀಡುತ್ತೇವೆ. ಆದರೆ ಅಂತಿಮವಾಗಿ ನಿರ್ಧಾರಕ್ಕೆ ಬರುವ ವೇಳೆಗೆ ಅದು ಕೇವಲ ಶಿಫಾರಸ್ಸು ಮಾತ್ರ ಆಗಿರುತ್ತದೆ ಎಂದು ಭಾರತದ ಮುಖ್ಯನ್ಯಾಯಮೂರ್ತಿಯಾಗಿದ್ದ ಎಚ್.ಎಲ್.ದತ್ತು ಹೇಳುತ್ತಾರೆ.
ಶಿಫಾರಸ್ಸುಗಳ ಅನುಷ್ಠಾನಕ್ಕೆ ನಾವು ಪತ್ರ ಬರೆದು ಒತ್ತಾಯಿಸುತ್ತಲೇ ಇರುತ್ತೇವೆ. ಆದರೆ ಅದನ್ನು ಜಾರಿಗೊಳಿಸುವುದು ಅಧಿಕಾರಿಗಳ ಮರ್ಜಿಗೆ ಬಿಟ್ಟದ್ದು. ಎಚ್‌ಎನ್‌ಆರ್‌ಸಿಗೆ ನಿಂದನೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಅವರು ಸ್ಪಷ್ಟಪಡಿಸಿದರು.
ಎಚ್‌ಎನ್‌ಆರ್‌ಸಿ ನೀಡುವ ಶಿಫಾರಸ್ಸುಗಳು, ಧೀರ್ಘಕಾಲ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದಂಥ ಅನುಭವಿಗಳಿಂದ ಮಾಡುವಂಥವುಗಳು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅನುಭವ ಇರುವವರು ಸಂಗ್ರಹಿಸಿದ ಸಾಕ್ಷಿ ಹಾಗೂ ದಾಖಲಿಸಿಕೊಂಡ ಹೇಳಿಕೆಗಳಿಂದ ಕೂಡಿದ್ದರೂ, ಶಿಫಾರಸ್ಸುಗಳ ಅನುಷ್ಠಾನ ವಿಚಾರಕ್ಕೆ ಬಂದರೆ, ಅಧಿಕಾರಿಗಳು ಆಸಕ್ತಿ ವಹಿಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News