ಅಮಿತ್ ಶಾಗೆ ಗುಜರಾತ್ ಮುಖ್ಯಮಂತ್ರಿ ಪಟ್ಟ ?

Update: 2016-06-02 07:55 GMT

ಅಹ್ಮದಾಬಾದ್, ಜೂ.2: ಗುಜರಾತ್‌ನಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಹಾಲಿ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಜನರೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಸಿಕೊಂಡು ಹೋಗಲು ವಿಫಲರಾಗಿದ್ದಾರೆಂಬ ಪಕ್ಷದ ಆಂತರಿಕ ಸಮೀಕ್ಷಾ ವರದಿಯ ಬಳಿಕ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲುವು ತರುವಂತಹ ನಾಯಕನನ್ನು ಮುಖ್ಯಮಂತ್ರಿಯನ್ನಾಗಿಸಲು ನಿರ್ಧರಿಸಿದೆ. ಈ ಹುದ್ದೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಿಂತ ಉತ್ತಮ ವ್ಯಕ್ತಿ ಈ ಹುದ್ದೆಗೆ ಬೇರೊಬ್ಬರಿಲ್ಲವೆಂಬ ತೀರ್ಮಾನಕ್ಕೆ ಪಕ್ಷದ ನಾಯಕರು ಬಂದಿದ್ದಾರೆಂದು ‘ಜನಸತ್ತಾ’ ವರದಿ ಮಾಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿ, ನಿತಿನ್ ಪಟೇಲ್, ಸೌರಭ್ ಪಟೇಲ್ ಅವರಂತಹ ಪ್ರಮುಖ ನಾಯಕರು ರಾಜ್ಯದಲ್ಲಿದ್ದರೂ ಯಾರೊಬ್ಬರೂ ಅಮಿತ್ ಶಾ ಅವರಂತೆ ತಮ್ಮ ಪ್ರಭಾವವನ್ನು ರಾಜ್ಯದ ಜನರ ಮೇಲೆ ಬೀರಲು ಸಾಧ್ಯವಿಲ್ಲವೆಂಬುದು ಪಕ್ಷದ ಅಭಿಮತವಾಗಿದೆ. ಶಾ ಅಲ್ಲದಿದ್ದರೆ ರೂಪಾನಿ ಅವರನ್ನು ಆರಿಸಬಹುದು ಎಂದು ಹೇಳಲಾಗುತ್ತಿದ್ದರೂ ರೂಪಾನಿ ಅವರ ಕ್ಷೇತ್ರವಾದ ರಾಜಕೋಟ್ ಹೊರತುಪಡಿಸಿದರೆ ಉಳಿದೆಡೆ ಅಷ್ಟೇನು ಪ್ರಭಾವಿ ನಾಯಕರಾಗದಿರುವುದು ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಗುಜರಾತ್ ಮುಖ್ಯಮಂತ್ರಿ ವಿಚಾರವಾಗಿ ಯಾವ ಪ್ರಶ್ನೆಗೂ ಅಮಿತ್ ಶಾ ಉತ್ತರ ನೀಡಲು ನಿರಾಕರಿಸಿದ್ದಾರಾದರೂ, ಅವರನ್ನು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ಏರಿಸಿದ ಪಕ್ಷದಲ್ಲಿ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಬೇರೊಬ್ಬ ನಾಯಕನನ್ನು ಆರಿಸಬೇಕಾಗುತ್ತದೆ. ಮೇಲಾಗಿ ಮೂಲಗಳು ತಿಳಿಸುವಂತೆ ಪ್ರಧಾನಿ ಪ್ರಕಾರ ಶಾ ಅವರ ಅವಶ್ಯಕತೆ ಗುಜರಾತ್‌ಗಿಂತ ಉತ್ತರ ಪ್ರದೇಶಕ್ಕೆ ಹೆಚ್ಚಿದೆ. ಏನಿದ್ದರೂ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News