ಮಹಿಳೆಯನ್ನು ರಕ್ಷಿಸಲು ‘ತುದಿಯಿಂದ’ ಹಿಂದೆ ಬಂದ ಬ್ರಿಟನ್‌ನ ಮಾಜಿ ಯೋಧ

Update: 2016-06-02 08:05 GMT

ಕೊಲ್ಕತ್ತಾ, ಜೂ.2: ಬ್ರಿಟಿಷ್ ನಾಗರಿಕ ಜಾನ್ ಬ್ರಿನ್ಸ್‌ಮೇ ಕಳೆದ ವಾರ ತಮ್ಮ ಮೌಂಟ್ ಎವರೆಸ್ಟ್ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದರೆ ಇದೀಗ ಅವರ ಹೆಸರು ಈ ವಿಶ್ವದ ಅತ್ಯಂತ ಎತ್ತರದ ಪರ್ವತವೇರಿದ 5,000ಕ್ಕೂ ಹೆಚ್ಚು ಪರ್ವತಾರೋಹಿಗಳ ಪಟ್ಟಿಯಲ್ಲಿ ಸೇರಿ ಬಿಡುತ್ತಿತ್ತು. ಆದರೆ ಜಾನ್ ಮಾನವೀಯತೆ ಮೆರೆಯುವ ಮೂಲಕ ಪರ್ವತಕ್ಕಿಂತಲೂ ಎತ್ತರಕ್ಕೇರಿದ್ದಾರೆ.
ಜಾನ್ ಮೌಂಟ್ ಎವರೆಸ್ಟ್‌ನ ತುತ್ತ ತುದಿ ತಲುಪಲು ಇನ್ನೇನು 450 ಮೀಟರ್ ಮಾತ್ರ ಬಾಕಿಯಿತ್ತು. ಅವರಿಗೆ ಅದಾಗಲೇ ಶುಭ ಹಾರೈಕೆಗಳ ಸಂದೇಶಗಳು ಬರಲಾರಂಭಿಸಿದ್ದವು. ಆದರೆ ಅಷ್ಟರಲ್ಲಿ ಭಾರತೀಯ ಪರ್ವತಾರೋಹಿ ಸುನೀತಾ ಹಝ್ರ ಪರ್ವತದಿಂದ ಕೆಳಗಿಳಿಯುವ ಸಮಯದಲ್ಲಿ ಜಾರಿಬಿದ್ದಿದ್ದಾರೆ ಹಾಗೂ ಅವರು ಆಮ್ಲಜನಕದ ಕೊರತೆ ಎದರಿಸುತ್ತಿದ್ದಾರೆ ಎಂಬ ವಿಚಾರ ಜಾನ್‌ರ ಗಮನಕ್ಕೆ ಬಂದಿತು. ಇದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಜಾನ್ ತಂಡದ ಇತರರು ತಮ್ಮ ಪರ್ವತಾರೋಹಣವನ್ನು ಮುಂದುವರಿಸಿದರೂ ಅವರನ್ನೆಲ್ಲ ಬಿಟ್ಟು ಸುನೀತಾರನ್ನು ರಕ್ಷಿಸಲು ಮುಂದಾದರು. ಅಷ್ಟೇ ಅಲ್ಲ ಅದರಲ್ಲಿ ಅವರು ಯಶಸ್ವಿಯೂ ಆದರು.
ಜಾನ್ ಆಕೆಗೆ ಸಹಾಯ ಮಾಡುತ್ತಿದ್ದಾಗ ಹಲವು ಪರ್ವತಾರೋಹಿಗಳು ಅಲ್ಲಿಂದ ಹಾದು ಹೋದರೂ ಯಾರೂ ಅವರ ಸಹಾಯಕ್ಕೆ ಬರಲಿಲ್ಲ ಎಂದು ಬೇಸರಿಸುತ್ತಾರೆ ಜಾನ್.
‘‘ಮೌಂಟ್ ಎವರೆಸ್ಟ್‌ನ ತುತ್ತತುದಿಗೇರುವ ಅವಕಾಶವನ್ನು ಕಳೆದುಕೊಂಡೆನೆಂಬ ದುಃಖವಿದೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಜೀವ ಉಳಿಸಿದ ಸಂತೋಷ ನನಗಿದೆ’’ಎಂದು ಜಾನ್‌ಹೇಳುವಾಗ ನಿಜವಾಗಿಯೂ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ.
‘‘ನನ್ನ ಜೀವ ಉಳಿದಿದೆಯೆಂದಾದರೆ ಅದಕ್ಕೆ ಜಾನ್ ಕಾರಣ, ನಾನು ಮನೆಗೆ ಹಿಂದಿರುಗಿ ನನ್ನ ಮಗುವಿನ ಮುಖ ನೋಡಬಹುದಾಗಿದ್ದರೆ ಅದಕ್ಕೂ ಅವರೇ ಕಾರಣ. ಬೇರಿನ್ನೇನು ಹೇಳಲಿ?’’ ಎಂದು ಗದ್ಗದಿತರಾಗಿ ನುಡಿಯುತ್ತಾರೆ ಬಂಗಾಳದ ಹಝ್ರ.
ಮಾಜಿ ಯೋಧರಾಗಿರುವ ಜಾನ್ ಅವರು ಬಾಸ್ನಿಯಾ, ಇರಾಕ್, ಅಫ್ಗಾನಿಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದು, ಬಾಂಬ್ ದಾಳಿಯೊಂದರಲ್ಲಿ ತಮ್ಮ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News