ಮಥುರಾ ಹಿಂಸಾಚಾರ: ಸಾವಿನ ಸಂಖ್ಯೆ 24ಕ್ಕೇರಿಕೆ

Update: 2016-06-03 11:26 GMT

ಮಥುರಾ, ಜೂ.3: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲಾದ ಸರಕಾರಿ ಜಮೀನು ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್(ಎಸ್‌ಪಿ), ಹಾಗೂ ಸ್ಟೇಶನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಹಿತ ಒಟ್ಟು 24 ಮಂದಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ 320 ಮಂದಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮೃತ ಪೊಲೀಸ್ ಕುಟುಂಬಕ್ಕೆ ತಲಾ ರೂ. 20ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಮಥುರಾದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಡಿಜಿಪಿ ಜಾವೇದ್ ಅಹ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿ(ಗೃಹ) ದೇಬಾಶಿಶ್ ಪಾಂಡ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ಆದೇಶದ ಮೇರೆಗೆ ಜವಾಹರ್ ಬಾಗ್‌ನಲ್ಲಿ ಸ್ವಾದೀನ್ ಭಾರತ್ ಸುಭಾಶ್ ಸೇನೆ(ಎಸ್‌ಬಿಎಸ್‌ಎಸ್)ಯಿಂದ ಒತ್ತುವರಿಯಾದ ಅನಧಿಕೃತ 270 ಎಕ್ರೆ ಭೂಮಿ ತೆರವುಗೊಳಿಸುವ ಯತ್ನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಸರಕಾರಿ ಜಮೀನಿನಲ್ಲಿ ಸುಮಾರು 3,000 ಮಂದಿ ಕಳೆದ ಎರಡು ವರ್ಷಗಳಿಂದ ಬಿಡಾರ ಹಾಕಿಕೊಂಡಿದ್ದರು.
 ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಾವಿರಾರು ಕೋಟಿ ಬೆಲೆ ಬಾಳುವ ಈ ಪ್ರದೇಶವನ್ನು ತಕ್ಷಣವೇ ವಶಪಡಿಸಿಕೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಆದೇಶ ನೀಡಿತ್ತು.
  ಅಕ್ರಮ ಆಸ್ತಿ ತೆರವು ಕಾರ್ಯಾಚರಣೆಯ ವೇಳೆ ಅಝಾದ್ ಭಾರತ್ ವಿಧಿಕ್ ವೈಚಾರಿಕ ಕ್ರಾಂತಿ ಸತ್ಯಗ್ರಾಹಿ ಸಂಘಟನೆ ಹಾಗೂ ಪೊಲೀಸರ ನಡುವೆ ಗುರುವಾರ ರಾತ್ರಿ ಘರ್ಷಣೆ ನಡೆದಿದೆ. ಅಕ್ರಮ ಶಿಬಿರಗಳ ತೆರವು ವಿರೋಧಿಸಿದ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿದೆ. ಘರ್ಷಣೆ ಹಿಂಸಾರೂಪ ಪಡೆದಿದ್ದು, ಘಟನೆಯಲ್ಲಿ ಎಸ್‌ಸಿ ಮುಕುಲ್ ದ್ವಿವೇದಿ ಹಾಗೂ ಸ್ಟೇಶನ್ ಹೌಸ್ ಆಫೀಸರ್ ಸಂತೋಷ್ ಯಾದವ್ ಸಾವನ್ನಪ್ಪಿದ್ದಾರೆ. 23 ಪೊಲೀಸರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News