ಬಿಹಾರ 12ನೇ ತರಗತಿ ಪರೀಕ್ಷೆ ಆವಾಂತರ

Update: 2016-06-05 03:57 GMT

ಪಟ್ನಾ, ಜೂ.5: ಪಠ್ಯವಿಷಯದ ಬಗ್ಗೆ ಮೂಲಭೂತ ಜ್ಞಾನ ಇಲ್ಲದಿದ್ದರೂ ಬೋಡರ್್ ಪರೀಕ್ಷೆಯಲ್ಲಿ ಟಾಪರ್ಗಳೆಂಬ ಕುಖ್ಯಾತಿಗೆ ಪಾತ್ರರಾಗಿದ್ದ ಇಬ್ಬರು ವಿದ್ಯಾರ್ಥಿಗಳ ಫಲಿತಾಂಶವನ್ನು ರದ್ದುಮಾಡಿ, ಬಿಹಾರ ಶಾಲಾ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ. ಇದರ ಜತೆಗೆ ವಿದ್ಯಾರ್ಥಿಗಳ ಕಾಲೇಜಿನ ಮಾನ್ಯತೆಯನ್ನೂ ರದ್ದು ಮಾಡಿದೆ.
ತೀವ್ರ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿಜ್ಞಾನ ಹಾಗೂ ಕಲೆ ವಿಷಯದ 14 ಮಂದಿ ಟಾಪರ್ಗಳಿಗೆ ಬಿಎಸ್ಇಬಿ ಶುಕ್ರವಾರ ಮರುಪರೀಕ್ಷೆ ನಡೆಸಿತ್ತು. ಆದರೆ ಈ ಪೈಕಿ 13 ಮಂದಿ ಮಾತ್ರ ಪರೀಕ್ಷೆ ಬರೆದಿದ್ದರು. ಕಲಾ ವಿಭಾದ ಟಾಪರ್ ರೂಬಿ ರಾಯ್ ಖಿನ್ನತೆಯ ಕಾರಣ ನೀಡಿ ಪರೀಕ್ಷೆಗೆ ಹಾಜರಾಗಿರಲಿಲ್ಲ. ಮಂಡಳಿ ಇದೀಗ ಆಕೆಗೆ ಮತ್ತೆ ಒಂದು ವಾರ ಕಾಲಾವಕಾಶ ನೀಡಿದ್ದು, ಮತ್ತೂ ಪರೀಕ್ಷೆಗೆ ಗೈರುಹಾಜರಾದರೆ, ಫಲಿತಾಂಶ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ವಿಜ್ಞಾನ ವಿಷಯದಲ್ಲಿ ಅಗ್ರಸ್ಥಾನ ಪಡೆದಿದ್ದ ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ಸೌರಭ್ ಶ್ರೇಷ್ಠ ಹಾಗೂ ರಾಹುಲ್ ರಾಜ್ ಅವರ ಫಲಿತಾಂಶವನ್ನು ರದ್ದು ಮಾಡಲಾಗಿದೆ. ಬಿಎಸ್ಇಬಿ ಉನ್ನತ ಸಮಿತಿ ಈ ನಿರ್ಧಾರ ಕೈಗೊಂಡಿದ್ದು, ಅವರು ಅಗ್ರಸ್ಥಾನಕ್ಕೆ ಅರ್ಹರಲ್ಲ ಎಂಬ ನಿರ್ಧಾರಕ್ಕೆ ಬಂದು, ಫಲಿತಾಂಶ ರದ್ದು ಮಾಡಿದೆ ಎಂದು ಶಿಕ್ಷಣ ಸಚಿವ ಅಶೋಕ್ ಕುಮಾರ್ ಚೌಧರಿ ಪ್ರಕಟಿಸಿದ್ದಾರೆ.
ಒಂದೇ ಸಂಸ್ಥೆ ಇಷ್ಟು ಉತ್ತಮ ಫಲಿತಾಂಶವನ್ನು ಹೇಗೆ ನೀಡುತ್ತಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಇದರಲ್ಲಿ ಮಂಡಳಿ ಅಧಿಕಾರಿಗಳು, ಸಿಬ್ಬಂದಿ ಅಥವಾ ಶಿಕ್ಷಕರ ಪಾತ್ರ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ. ತಪ್ಪಿತಸ್ಥರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಇಡೀ ರಾಜ್ಯಕ್ಕೆ ನಾಚಿಕೆಗೇಡು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News