ವಿವಾದಿತ ರಾಜಸ್ಥಾನ ಬಿಜೆಪಿ ಶಾಸಕನಿಂದ ಹೊಸ "ಜ್ಞಾನ"

Update: 2016-06-05 04:08 GMT

ಜೈಪುರ, ಜೂ.5: ಕಪ್ಪುಹಣ ವಿಚಾರದಲ್ಲಿ ಕೇಂದ್ರ ಸರಕಾರ ನಿಷ್ಕ್ರಿಯವಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಇದೀಗ ಈ ಕಾಳಧನವನ್ನು ಸದ್ಬಳಕೆ ಮಾಡಿಕೊಳ್ಳುವ ತಂತ್ರದ ಪ್ರಸ್ತಾವವೊಂದನ್ನು ಮುಂದಿಟ್ಟಿದ್ದಾರೆ.
"ನನಗೆ ಯಾವುದೇ ಅಕ್ರಮ ಹಣದ ವಾಗ್ದಾನ ಬಂದಾಗ, ನಾನು ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ದೇವಸ್ಥಾನಗಳ ನಿರ್ಮಾಣ, ಬಡಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ನೀಡಲು, ಗೋ ಸಂರಕ್ಷಣೆಗೆ ಬಳಸುತ್ತೇನೆ ಹಾಗೂ ದಾನಿಗಳಿಗೆ ಸ್ವೀಕೃತಿ ರಸೀದಿಯನ್ನೂ ನೀಡುತ್ತೇನೆ" ಎಂದು ಅವರು ಹೇಳಿದ್ದಾರೆ.
ಜೆಎನ್ ಯು ವಿವಾದ ಮತ್ತು ಗಾಂಧಿ- ನೆಹರೂ ಕುಟುಂಬದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಶಾಸಕ ಇದೀಗ ಕಪ್ಪುಹಣ ನಿರ್ವಹಣೆಗೆ ಹೊಸ ತಂತ್ರವನ್ನು ಬಹಿರಂಗಗೊಳಿಸಿ ಸುದ್ದಿಯಲ್ಲಿದ್ದಾರೆ. ಅಲ್ವಾರ್ನಲ್ಲಿ ಪತ್ರಕರ್ತರ ಜತೆ ಮಾತನಾಡುವ ವೇಳೆ ಈ ಹೊಸ ಸೂತ್ರ ಬಿಚ್ಚಿಟ್ಟರು.
ರಾಜಕಾರಣಿಗಳಿಗೆ ಕಪ್ಪುಹಣ ನೀಡಲಾಗುತ್ತದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, "ಹೌದು; ಸಾಮಾನ್ಯವಾಗಿ ಅಂಥ ಹಣ ಬರುತ್ತದೆ. ನನಗೆ ಅಂಥ ಹಣ ಬಂದಾಗಲೆಲ್ಲ ನಾನು ಅದನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸುವುದಿಲ್ಲ. ಹೀಗೆ ಹಣ ನೀಡಲು ಮುಂದಾದವರು ಪಕ್ಷಕ್ಕೆ ದೇಣಿಗೆ ನೀಡಬಹುದೇ ಎಂದು ಕೇಳುತ್ತಾರೆ.ಆಗ ನಾನು ಪಕ್ಷಕ್ಕೆ ಸಾಕಷ್ಟು ಹಣವಿದೆ ಎಂದು ಉತ್ತರಿಸುತ್ತೇನೆ" ಎಂದು ಅಹುಜಾ ವಿವರಿಸಿದರು.
ನನಗೆ ನೀಡುವ ಹಣವನ್ನು ಉತ್ತಮ ಕಾರ್ಯಗಳಿಗೆ ಬಳಸುತ್ತೇನೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News