ಮಲ್ಯ ಪ್ರಕರಣ: ಸ್ಪಷ್ಟನೆ ಕೇಳಿದ ಇಂಟರ್‌ಪೋಲ್

Update: 2016-06-05 18:35 GMT

ಹೊಸದಿಲ್ಲಿ, ಜೂ.5: ಭಾರತೀಯ ಬ್ಯಾಂಕುಗಳಿಗೆ ಸುಮಾರು 9,000 ಕೋಟಿ ರೂಪಾಯಿ ಸುಸ್ತಿಬಾಕಿ ಉಳಿಸಿಕೊಂಡಿರುವ ಮದ್ಯ ದೊರೆ ವಿಜಯ ಮಲ್ಯ ವಿರುದ್ಧ ಹಣಕಾಸು ವಂಚನೆ ಆರೋಪದಲ್ಲಿ ಜಾಗತಿಕ ಬಂಧನ ವಾರಂಟ್ ಹೊರಡಿಸುವ ಸಂಬಂಧ ಕಾನೂನು ಜಾರಿ ನಿರ್ದೇಶನಾಯಲಯದಿಂದ ಕೆಲ ಸ್ಪಷ್ಟನೆಗಳನ್ನು ಬಯಸಿ ಇಂಟರ್‌ಪೋಲ್ ಅರ್ಜಿ ಸಲ್ಲಿಸಿದೆ.
ಕಾನೂನು ಜಾರಿ ನಿರ್ದೇಶನಾಲಯ ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ಒದಗಿಸುವಂತೆ ಕೋರಿ ಜಾಗತಿಕ ಪೊಲೀಸ್ ಸಂಸ್ಥೆಯ ಅಕಾರಿಗಳು ನೋಟಿಸ್ ನೀಡಿದ್ದಾರೆ. ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಮುನ್ನ ಅನುಸರಿಸುವ ಕಾನೂನು ಕ್ರಮಗಳೇನು ಎಂದು ಸ್ಪಷ್ಟನೆ ಬಯಸಿದೆ. ಮಲ್ಯ ವಿರುದ್ಧ ಐಡಿಬಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣ ಬಗ್ಗೆ ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಸಿಬಿಐ ಕೂಡ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.
ಮಲ್ಯ ವಿರುದ್ಧದ ಹಣಕಾಸು ವಂಚನೆ ಆರೋಪದ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಇಂಟರ್‌ಪೋಲ್ ಕೋರಿದೆ. ಕಾನೂನು ಜಾರಿ ನಿರ್ದೇಶನಾಲಯ, ಮಲ್ಯ ವಿರುದ್ಧ ಜಾಗತಿಕ ಬಂಧನ ವಾರಂಟ್ ಹೊರಡಿಸುವಂತೆ ಮಾಡಿದ ಮನವಿಯನ್ನು ಜಾಗತಿಕ ಪೊಲೀಸ್ ಸಂಸ್ಥೆ ತಿರಸ್ಕರಿಸಿಲ್ಲ. ಈ ಸ್ಪಷ್ಟನೆಗಳಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಮೂಲಗಳು ಹೇಳಿವೆ.
ಹಲವು ಪ್ರಕರಣಗಳಲ್ಲಿ ಹೀಗೆ ಸ್ಪಷ್ಟನೆ ಕೇಳಲಾಗುತ್ತಿದೆ. ಲಲಿತ್ ಮೋದಿ ಪ್ರಕರಣದಲ್ಲೂ ಇಂಥ ಸ್ಪಷ್ಟನೆ ಕೋರಲಾಗಿತ್ತು. ಇಂಟರ್‌ಪೋಲ್‌ನ ಅಗತ್ಯಗಳನ್ನು ಪೂರೈಸಲಾಗುವುದು ಎಂದು ಸ್ಪಷ್ಟಡಿಸಿವೆ. ಕಳೆದ ತಿಂಗಳು ಮಲ್ಯ ವಿರುದ್ಧ ಆರ್‌ಸಿಎನ್ ಹೊರಡಿಸುವಂತೆ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News