ಜವಾಹರ್ ಭಾಗ್ ನೊಳಗೆ ಮಥುರಾ ಪಂಥದ ಬಾಂಬ್ ಫ್ಯಾಕ್ಟರಿ!

Update: 2016-06-06 04:17 GMT

ಮಥುರಾ, ಜೂ.6: ಹುಲುಸಾಗಿ ಬೆಳೆದ ಆರ್ಕೆಡ್ ಗಳಿಗೆ ಹೆಸರಾಗಿದ್ದ ಜವಾಹರ್ ಭಾಗ್ ಪಾರ್ಕ್ ಇದೀಗ ಯುದ್ಧರಂಗವಾಗಿ ಮಾರ್ಪಟ್ಟಿದೆ. ಅರೆಸುಟ್ಟ ವಾಹನಗಳು, ಭಸ್ಮವಾದ ಮನೆಗಳು ಹಾಗೂ ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು, ಕರುಳು ಕಿತ್ತು ಬರುವಂಥ ಭಯಾನಕ ದೃಶ್ಯಗಳಿಗೆ ಸಾಕ್ಷಿಯಾದ ಈ ಪ್ರದೇಶ ಘಟನೆ ನಡೆದು 72 ಗಂಟೆಗಳ ಬಳಿಕ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿದ್ದು, ಪೊಲೀಸರು ಹೇಳುವ ಪ್ರಕಾರ, ಬಾಂಬ್ ತಯಾರಿಕಾ ಫ್ಯಾಕ್ಟರಿಯಾಗಿ ಇದು ಕಾರ್ಯ ನಿರ್ವಹಿಸುತ್ತಿತ್ತು.
260 ಎಕರೆ ವಿಶಾಲ ಪ್ರದೇಶ ಹೇಗೆ ಸ್ವಾಧೀನ ಭಾರತ ಸುಭಾಸ್ ಸೇನಾ ಮುಖಂಡ ರಾಮ್ ವೃಕ್ಷ ಯಾದವ್ ಹಾಗೂ ಅವರ ಶಸ್ತ್ರಸಜ್ಜಿತ ಪಡೆಯ ಸಾಮ್ರಾಜ್ಯವಾಗಿ ಮಾರ್ಪಟ್ಟಿತ್ತು. ಧೀರ್ಘಯುದ್ಧವನ್ನು ನಿರೀಕ್ಷಿಸಿಯೇ ಅಪಾರ ಪ್ರಮಾಣದ ಆಹಾರಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು.
ಸಮುದಾಯ ಪಾಕಶಾಲೆಯ ಬೃಹತ್ ಕಟ್ಟಡದಲ್ಲಿ, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಜನರೇಟರ್, ಹಲವು ಬ್ಯಾಟರಿಗಳು ಹಾಗೂ ಇನ್ವರ್ಟರ್ಗಳು, ಸೌರ ಪ್ಯಾನಲ್ ಗಳು, ಎರಡು ತಿಂಗಳ ಹಿಂದೆಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ, ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಈ ಪಾರ್ಕ್ ನ ಒಳಗೆ, ಬಟ್ಟೆಗಳು, ಆಹಾರ ವಸ್ತುಗಳು, ಪುಸ್ತಕ ಹಾಗೂ ಕಾಮಿಕ್ಸ್ ಗಳು ಇರುವ ಕಟ್ಟಡಗಳಿವೆ. ಈ ಗುಂಪು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಸರಕಾರಿ ಕಚೇರಿಗಳು ಈ ಪ್ರದೇಶದಲ್ಲಿದ್ದವು. ಇಲ್ಲಿ ಇರುವ ವಸ್ತುಗಳನ್ನು ನೋಡಿದರೆ, ಪ್ರತ್ಯೇಕ ಪ್ರಪಂಚವಾಗಿ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿರುವುದು ಕಂಡುಬರುತ್ತದೆ.
ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 5 ಕೆಜಿ ಗಂಧಕ, 1 ಕೆಜಿ ಪೊಟ್ಯಾಷಿಯಂ, 2.5 ಕೆ.ಜಿ. ಮದ್ದುಗುಂಡಿನ ಪುಡಿ ಪತ್ತೆಯಾಗಿದ್ದು, ಇದು ಉದ್ಯಾನವನದೊಳಗೆ ಬಾಂಬ್ ಫ್ಯಾಕ್ಟರಿ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಪೊಲೀಸ್ ಅಧೀಕ್ಷಕ ಅರುಣ್ ಸಿಂಗ್ ಹೇಳಿದ್ದಾರೆ. ಇದರಲ್ಲಿ ಸೂಪರ್ ಮಾರ್ಕೆಟ್, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳು, ಪುಟ್ಟ ಶಿವ ದೇಗುಲ ಕೂಡಾ ಇದ್ದುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News