ಒಂದೇ ದಿನ ನಾಲ್ಕು ರಾಜ್ಯಗಳಿಂದ ಕಾಂಗ್ರೆಸ್ ಗೆ ಕೆಟ್ಟ ಸುದ್ದಿ !

Update: 2016-06-07 06:33 GMT

ಹೊಸದಿಲ್ಲಿ, ಜೂನ್ 7: ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕಳಕೊಂಡ ಬೇಸರದಲ್ಲಿ ತೊಳಲಾಡುತ್ತಿರುವ ಕಾಂಗ್ರೆಸ್‌ನ ಕಷ್ಟದ ದಿನಗಳು ಮುಗಿದಂತೆ ಕಾಣಿಸುತ್ತಿಲ್ಲ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಈಗ ಪಕ್ಷದ ನಾಯಕರಲ್ಲಿ ಬಂಡಾಯ ಆರಂಭವಾಗಿದೆ. ಜೊತೆಗೆ ಹಿರಿಯ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ.ಸೋಮವಾರ ಕಾಂಗ್ರೆಸ್‌ಗೆ ನಾಲ್ಕು ಕೆಟ್ಟ ಸುದ್ದಿ ವರದಿಯಾಗಿದ್ದವು. ಕೇಂದ್ರ ಮಾಜಿ ಸಚಿವ ಕಾಂಗ್ರೆಸ್‌ನ ಹಿರಿಯ ನಾಯಕ ಗುರುದಾಸ್ ಕಾಮತ್ ಸೋಮವಾರ ಪಕ್ಷಕ್ಕೆ ರಾಜಿನಾಮೆ ನೀಡಿ ತಾನು ರಾಜಕೀಯದಿಂದ ನಿವೃತ್ತನಾಗುವೆ ಎಂದು ಘೋಷಿಸಿದ್ದಾರೆ. ಕಾಮತ್ ಮುಂಬೈಯವರಾಗಿದ್ದು ಮುಂದಿನ ವರ್ಷ ಅಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು. ಗುರುದಾಸ್ ಕಾಮತ್‌ರ ರಾಜಿನಾಮೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಎನ್ನಲಾಗುತ್ತಿದೆ.

 ಕಾಮತ್‌ರನ್ನು ಗಾಂಧಿ ಕುಟುಂಬದ ವಿಶ್ವಸ್ಥ ಎನ್ನಲಾಗುತ್ತದೆ ಆದರೆ ಅವರ ರಾಜಿನಾಮೆ ರಾಜಕೀಯ ವಲಯದಲ್ಲಿ ಬಹಳ ಆಶ್ಚರ್ಯಕ್ಕೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರಿಗೆ ಸಂದೇಶ ಕಳುಹಿಸಿದ್ದು" ಕೆಲವು ತಿಂಗಳಿಂದ ನನಗೆ ಅನಿಸುತ್ತಿದೆ, ಹೊಸಜನರು ಮುಂದೆ ಬರಲಿಕ್ಕಾಗಿ ತಾನು ಹಿಂದೆ ಸರಿಯಬೇಕೆಂದು. ತಾನು ಹತ್ತು ದಿವಸಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆಯನ್ನು ಭೇಟಿಯಾಗಿ ರಾಜಿನಾಮೆ ವಿಷಯ ಚರ್ಚಿಸಿದ್ದೇನೆ. ಆನಂತರ ನಾನು ಅವರಿಗೆ ಮತ್ತು ರಾಹುಲ್‌ರಿಗೆ ಪತ್ರ ಬರೆದು ಪಕ್ಷ ತೊರೆಯುವುದನ್ನು ತಿಳಿಸಿದ್ದೇನೆ. ಅವರಿಬ್ಬರಿಂದ ಯಾವುದೇ ಉತ್ತರ ಬಂದಿಲ್ಲ. ನಾನು ಪಕ್ಷದ ನಿಯಮ ಪ್ರಕಾರ ರಾಜಕೀಯದಿಂದ ನಿವೃತ್ತನಾಗುವುದಾಗಿ ಅವರಿಗೆ ತಿಳಿಸಿದ್ದೆ" ಎಂದು ಬರೆದಿದ್ದಾರೆ. ತನ್ನನ್ನು ಮೂಲೆಗುಂಪು ಮಾಡಿದ್ದಕ್ಕೆ ಗುರುದಾಸ್ ಕಾಮತ್ ಕೋಪಗೊಂಡಿದ್ದರು ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.ಮಾಜಿ ಕಾಂಗ್ರೆಸ್ ಸಚಿವರೊಬ್ಬರು " ಅವರು ಪಕ್ಷದಲ್ಲಿ ಸುಧಾರಣೆ ತರಲಿಕ್ಕಾಗಿ ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಲಾಯಿತು" ಎಂದಿದ್ದಾರೆ. ರಾಹುಲ್ ಗಾಂಧಿಗೆ ಮುಂಬೈ ಕಾಂಗ್ರೆಸ್ ನ ಪ್ರಮುಖ ಸಂಜಯ್ ನಿರುಪಮರು ರಾಹುಲ್ ಗಾಂಧಿಗೆ ಹೆಚ್ಚು ನಿಕಟವಾಗಿರುವುದು ಅವರನ್ನು ನೋಯಿಸಿದೆ ಎಂದು ಇತರ ನಾಯಕರು ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಸಭೆ ಚುನಾವಣೆ ವಿಚಾರದಲ್ಲಿಯೂ ಗುರುದಾಸ್ ಕಾಮತ್ ಕುಪಿತರಾಗಿದ್ದರು ಎನ್ನಲಾಗುತ್ತಿದೆ.

     ಇತ್ತ ಛತ್ತೀಸ್‌ಗಢದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಅಧಿಕಾರದಿಂದ ಹೊರಗಿರುವ ಕಾಂಗ್ರೆಸ್‌ಗೆ ಸೋಮವಾರ ಪ್ರಮುಖ ಹೊಡೆತವೊಂದು ಬಿದ್ದಿದೆ. ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ತನ್ನ ಹುಟ್ಟೂರಿನ ಗ್ರಾಮ ಮರ್‌ವಾಹಿಯಲ್ಲಿ ಜೋಗಿ ಈ ಕುರಿತು ಘೋಷಣೆ ಹೊರಡಿಸಿದ್ದಾರೆ. ಅವರ ಪುತ್ರ ಅಮಿತ್ ಜೋಗಿ, ಪತ್ನಿ ರೇಣು ಹಾಗೂ ಕೆಲವು ಕಾಂಗ್ರೆಸ್ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆದರೆ ಪಕ್ಷದ ಹೆಸರು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ರಾಜ್ಯದ ಕುರಿತ ನಿರ್ಣಯ ಇನ್ನು ದಿಲ್ಲಿಯಿಂದ ಆಗುವುದಿಲ್ಲ ಎಂದು ಜೋಗಿ ಗುಡುಗಿದ್ದಾರೆ. ಅಸ್ಸಾಮ್‌ನಲ್ಲಿ ಅಧಿಕಾರವನ್ನೇ ಕಳೆದು ಕೊಂಡ ಕಾಂಗ್ರೆಸ್‌ಗೆ ಈಗ ತ್ರಿಪುರದಲ್ಲಿಯೂ ಕಾಂಗ್ರೆಸ್ ಗೆ ಕಷ್ಟದ ದಿನವೇ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿಮಾಡಿದ್ದನ್ನು ಪ್ರತಿಭಟಿಸಿ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಜಿತೇನ್ ಸರ್ಕಾರ್ ರಾಜಿನಾಮೆ ನೀಡಿದ್ದಾರೆ. ತನ್ನ ರಾಜಿನಾಮೆಯನ್ನು ಅವರು ಸ್ಪೀಕರ್‌ರಿಗೆ ಸಲ್ಲಿಸಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ತ್ರಿಪುರದ ಹಲವು ಕಾಂಗ್ರೆಸಿಗರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

  ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆ ಕಾಂಗ್ರೆಸ್‌ಗೆ “ಮಾಡು ಇಲ್ಲವೇ ಮಡಿ” ಎಂಬಂತಾಗಿದೆ. ಪಕ್ಷ ಇಲ್ಲಿ ಗೆಲುವಿಗೆ ಸಿದ್ಧತೆ ನಡೆಸುತ್ತಿದೆ. ಆದರೆ ಕಾರ್ಯಕರ್ತರು ಒಗ್ಗಾಟ್ಟಾಗಿರುವುದು ಕಂಡು ಬರುತ್ತಿಲ್ಲ. ಪ್ರಿಯಾಂಕಾಗಾಂಧಿಯನ್ನು ಪಕ್ಷಕ್ಕೆ ಕರೆತರುವ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿವೆ. ಅಲ್ಪಸಂಖ್ಯಾತರ ಮೋರ್ಚಾ ರಾಹುಲ್‌ರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪ್ರಸ್ತಾವ ಪಾಸು ಮಾಡಿದೆ.ಈ ಕೆಲಸ ಬಹಳ ಬೇಗ ಆಗಬೇಕೆಂದು ಅದು ಒತ್ತಾಯಿಸುತ್ತಿದೆ. ಆದರೆ ಪಕ್ಷದ ರಾಜ್ಯ ಘಟಕ ಈ ಪ್ರಸ್ತಾವಕ್ಕೂ ತನಗೂ ಅಂತರವನ್ನು ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News