ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ

Update: 2016-06-08 17:21 GMT

ಹೊಸದಿಲ್ಲಿ, ಜೂ.8: ಅಜಿತ್ ಜೋಗಿ ಹೊಸ ರಾಜಕೀಯ ಪಕ್ಷದ ರಚನೆಯನ್ನು ಘೋಷಿಸಿದ ಒಂದು ದಿನದ ಬಳಿಕ, ಮಂಗಳವಾರ ಅವರ ನಿರ್ಗಮನವನ್ನು ಸ್ವಾಗತಿಸಿದ್ದ ಕಾಂಗ್ರೆಸ್ ಪಕ್ಷ, ಜೋಗಿಯವರನ್ನು ಉಚ್ಚಾಟಿಸುವ ಕಷ್ಟ ತಪ್ಪಿತೆಂದು ಕುಹಕವಾಡಿತ್ತು.

 ಛತ್ತೀಸ್‌ಗಡ ಮಾಜಿ ಮುಖ್ಯಮಂತ್ರಿಯ ನಿರ್ಗಮನವನ್ನು ಕಾಂಗ್ರೆಸ್ ಸಂಭ್ರಮಿಸುತ್ತಿರುವಂತೆಯೇ, ಅದು ಮಹಾರಾಷ್ಟ್ರ, ಮೇಘಾಲಯ, ಉತ್ತರಾಖಂಡ ಹಾಗೂ ತ್ರಿಪುರಗಳಲ್ಲಿ ಅಸಮಾಧಾನಿತ ನಾಯಕರೊಂದಿಗೆ ಹೋರಾಡಬೇಕಾಗಿ ಬಂದಿದೆ.
ಇದು ಒಳ್ಳೆಯ ಬಿಡುಗಡೆಯಾಗಿದೆ. ಜೋಗಿ, ಪಕ್ಷದಿಂದ ಅವರನ್ನು ಉಚ್ಚಾಟಿಸುವ ತನ್ನ ಕೆಲಸವನ್ನು ಹಗುರಗೊಳಿಸಿದರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಪತ್ರಕರ್ತರಿಗಿಲ್ಲಿ ತಿಳಿಸಿದರು.
ಆದಾಗ್ಯೂ, ಅದು ಮಹಾರಾಷ್ಟ್ರ, ಮೇಘಾಲಯ ಹಾಗೂ ಉತ್ತರಾಖಂಡಗಳಲ್ಲಿ ಇದೇ ರೀತಿಯ ಸೋಗನ್ನು ತಳೆಯುವಂತಿಲ್ಲ. ಈ ರಾಜ್ಯಗಳ ಕಾಂಗ್ರೆಸ್ ನಾಯಕರು ಪಕ್ಷದ ಸತತ ಚುನಾವಣಾ ಸೋಲುಗಳ ಬಳಿಕವೂ ಸರಿಪಡಿಸುವ ಕ್ರಮ ಕೈಗೊಳ್ಳದಿರುವ ಕೇಂದ್ರ ನಾಯಕತ್ವದ ವಿರುದ್ಧ ಮುನಿದಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸುವ ಮೂಲಕ ಆಶ್ಚರ್ಯವನ್ನುಂಟು ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುರುದಾಸ ಕಾಮತ್‌ರನ್ನು ತಲುಪುವ ಪ್ರಯತ್ನವನ್ನು ಕೇಂದ್ರೀಯ ನಾಯಕತ್ವ ಆರಂಭಿಸಿದೆ.
ಕಾಮತ್‌ರೊಂದಿಗೆ ಮಾತುಕತೆ ನಡೆಸುವ ಹೊಣೆಯನ್ನು ಹಿರಿಯ ನಾಯಕ ಅಹ್ಮದ್ ಪಟೇಲ್‌ರಿಗೆ ನೀಡಲಾಗಿದೆಯೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ಗೆ ಕಾಮತ್ ರಾಜೀನಾಮೆ ನೀಡಿದ್ದಾರೆಂಬ ವರದಿಯನ್ನು ತಾನು ಸ್ಪಷ್ಟವಾಗಿ ತಳ್ಳಿ ಹಾಕುತ್ತೇನೆ. ಅವರು ಈಗಲೂ ಮುಂದೆಯೂ ಕಾಂಗ್ರೆಸ್ ಕುಟುಂಬದ ಭಾಗವಾಗಿಯೇ ಇರುತ್ತಾರೆಂದು ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಮೇಘಾಲಯದಲ್ಲಿ ಕಳೆದ ತಿಂಗಳು ತುರಾ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ತನ್ನ ಪತ್ನಿ ದಿಕ್ಕಾಂಚಿ ಶಿರಾ ಸೋತ ಬಳಿಕ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಬಂಡಾಯವನ್ನೆದುರಿಸುತ್ತಿದ್ದಾರೆ.
ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸಲು ಸಂಪುಟ ಪುನಾರಚನೆ ಸಹಿತ ರಾಜ್ಯದಲ್ಲಿ ಬದಲಾವಣೆಗೆ ಆಗ್ರಹಿಸಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ಡಿ. ಲಪಾಂಗ್ ಹಾಗೂ ಎಸ್.ಸಿ. ಮರಕ್ ಕಾಂಗ್ರೆಸ್‌ನ ಕೇಂದ್ರೀಯ ನಾಯಕತ್ವವನ್ನು ಭೇಟಿಯಾಗಿದ್ದಾರೆ.
ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್‌ರ ಉಚ್ಚಾಟನೆಗೆ ಬಿಜೆಪಿ ನಡೆಸಿದ್ದ ಪ್ರಯತ್ನವನ್ನು ತಡೆಯಲು ಸಫಲವಾದ ಕಾಂಗ್ರೆಸ್, ಈಗ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಾಮಕರಣದ ಸಂಬಂಧ ಹೊಸ ಸಂಕಷ್ಟಕ್ಕೆ ಸಿಲುಕಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News