ಚೈನೀಸ್ ಹ್ಯಾಕರ್‌ಗಳಿಂದ ಭಾರತೀಯ ಸರಕಾರಿ ಮಾಹಿತಿಗೆ ಕನ್ನ!

Update: 2016-06-09 03:15 GMT

ಹೈದರಾಬಾದ್, ಜೂ.9: ಚೀನಾದ ಸೈಬರ್ ಹ್ಯಾಕರ್ ಗುಂಪಾದ ಡಾಂಟಿ, ಭಾರತದಲ್ಲಿ ಹೊಸದಿಲ್ಲಿ ಮತ್ತು ವಿವಿಧ ಇತರ ಪ್ರದೇಶಗಳ ಉನ್ನತ ಅಧಿಕಾರಿಗಳ ಕಂಪ್ಯೂಟರ್‌ಗಳ ಮಾಹಿತಿಗೆ ಕನ್ನ ಹಾಕಿದೆ ಎಂದು ಸೈಬರ್ ಭದ್ರತಾ ಕಂಪೆನಿಯಾದ ಕಾಸ್ಪೆರ್‌ಸ್ಕಿ ಲ್ಯಾಬ್ ಪ್ರಕಟಿಸಿದೆ.

ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಉನ್ನತ ಅಧಿಕಾರಿಗಳು, ದೊಡ್ಡ ಪ್ರಮಾಣದ ಸೈಬರ್ ದಾಳಿಯನ್ನು ಖಚಿತಪಡಿಸಿದ್ದಾರಾದರೂ, ಈ ಬಗ್ಗೆ ವಿವರ ನೀಡಲು ನಿರಾಕರಿಸಿದ್ದಾರೆ. ಈ ತನಿಖೆ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಮಾಹಿತಿ ಬಹಿರಂಗಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕೃತ ಮೂಲಗಳು, ಕೇಂದ್ರ ಸಂಪುಟ ಕಾರ್ಯದರ್ಶಿಯವರ ಕಂಪ್ಯೂಟರ್‌ನ ಕೆಲ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದಾರೆ. ಇದನ್ನು ಈಗ ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿವೆ.

ಮಾಮೂಲಿ ತಪಾಸಣೆ ವೇಳೆ ಇದು ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗಿದೆ. ಇಂಥ ದಾಳಿಗಳಲ್ಲಿ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದಾಗ್ಯೂ ಇದು ದೊಡ್ಡ ಪ್ರಮಾಣದ ಅಪಾಯವೇನೂ ಅಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ವಿಶ್ವದ ಅತ್ಯುನ್ನತ ಸೈಬರ್ ಭದ್ರತಾ ಕಂಪೆನಿಗಳಲ್ಲೊಂದಾದ ಕಾಸ್ಪೆರ್‌ಸ್ಕಿ ಲ್ಯಾಬ್ಸ್ ಪ್ರಕಾರ, ಕ್ಯಾಬಿನೆಟ್ ದರ್ಜೆಯ 12ಕ್ಕೂ ಹೆಚ್ಚು ಅಧಿಕಾರಿಗಳ ಮಾಹಿತಿಗಳು ಹ್ಯಾಕ್ ಆಗಿವೆ ಎಂದು ಸಂಸ್ಥೆಯ ಆಗ್ನೇಯ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅಲ್ತಾಫ್ ಹೆಡ್ಲೆ ಹೇಳಿದ್ದಾರೆ. ಸರಕಾರದ ಸೂಕ್ಷ್ಮ ಮಾಹಿತಿಗಳನ್ನು ಹ್ಯಾಕ್ ಮಾಡಲು ಬಳಸಿದ ತಂತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News