ಮುಸ್ಲಿಂ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಒಡವೆ ಒತ್ತೆಯಿಟ್ಟ ಶ್ರೀದೇವಿ ಟೀಚರ್ !

Update: 2016-06-09 07:28 GMT

ಹೈದರಾಬಾದ್, ಜೂ.9: ಜಾತಿ, ಧರ್ಮಗಳ ಹೆಸರಿನಲ್ಲಿ ಕಚ್ಚಾಡುವ ಜನರ ನಡುವೆ ಮಾನವತೆಯ ಹಣತೆ ಬೆಳಗಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಶ್ರೀದೇವಿ ಎಂಬ ಹೆಸರಿನ ಟೀಚರ್.

ಅವರೇನು ಮಾಡಿದರು ಗೊತ್ತೇ ? ತಮ್ಮ ಬಡ ಮುಸ್ಲಿಮ್ ವಿದ್ಯಾರ್ಥಿಯೊಬ್ಬನಿಗೆ ಭವನ್ಸ್ ಕಾಲೇಜಿನಲ್ಲಿ ಪ್ರವೇಶ ದಕ್ಕಿಸುವ ಸಲುವಾಗಿ ತಮ್ಮ ಒಡವೆಗಳನ್ನೇ ಒತ್ತೆಯಿಟ್ಟು, ಆತನ ಒಂದು ವರ್ಷದ ಫೀಸ್ ಪಾವತಿಸಿದ್ದಾರೆ. ಆಕೆಯ ಈ ಮಹಾನ್ ಕಾರ್ಯವನ್ನು ಗುರುತಿಸಿ ಹೀಲಿಂಗ್ ಹ್ಯಾಂಡ್ ಎಂಬ ಸಂಸ್ಥೆ ಆಕೆಗೆ 14,000 ರೂ. ನಗದನ್ನು ಕಾಣಿಕೆಯಾಗಿ ನೀಡಿದೆಯಲ್ಲದೆ ಶಿಕ್ಷಕಿ ಒತ್ತೆಯಿಟ್ಟ ಒಡವೆಯನ್ನು 27,000 ರೂ. ಪಾವತಿಸಿ ಬಿಡಿಸಿಕೊಂಡಿದೆ.

 ಸಿಯಾಸತ್ ಡೈಲಿ ಪತ್ರಿಕೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ದೈನಿಕದ ಸುದ್ದಿ ಸಂಪಾದಕ ಅಮಿರ್ ಆಲಿ ಖಾನ್‌ಶ್ರೀದೇವಿ ಟೀಚರ್‌ಗೆ ನಗದು ಪುರಸ್ಕಾರ ನೀಡಿ ಆಕೆಗೆ ಶಾಲು ಹೊದೆಸಿ ಸನ್ಮಾನಿಸಿದರು. ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಆಡಳಿತ ಟ್ರಸ್ಟಿ ಡಾ. ಶೌಕತ್ ಅಲಿ ಮಿರ್ಜಾ ಮತ್ತು ಫೈಝ್-ಇ- ಆಮ್ ಟ್ರಸ್ಟ್‌ನ ಕಾರ್ಯದರ್ಶಿ ಇಫ್ತೆಕರ್ ಹುಸ್ಸೈನ್ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಮಿರ್ಝಾ ಘಟನಾವಳಿಗಳನ್ನು ವಿವರಿಸಿದ್ದು ಹೀಗೆ. ಮಲೌಳಿಯಲ್ಲಿ ಆಟೋ ಚಾಲಕನಾಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರ ಪುತ್ರನಿಗೆ ಹೆಲ್ಪಿಂಗ್ ಹ್ಯಾಂಡ್ ಈ ಹಿಂದೆ ಶಿಕ್ಷಣದ ಉದ್ದೇಶಕ್ಕಾಗಿ 11,500 ರೂ. ನೀಡಿತ್ತು. ಅದೇ ಹುಡುಗನ ಕಿರಿಯ ಸಹೋದರನಿಗೆ ಭವನ್ಸ್ ಕಾಲೇಜಿನಲ್ಲಿ ಪ್ರವೇಶಾತಿ ಶುಲ್ಕ ಪಾವತಿಸಲು ಹಣವಿಲ್ಲದೆ ಆತನ ತಂದೆ ಸಂಸ್ಥೆಯನ್ನು ಸಂಪರ್ಕಿಸಿದ್ದರು.

ಆದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಒಂದೇ ಕುಟುಂಬದ ಇಬ್ಬರಿಗೆ ಹಣಕಾಸು ಸಹಾಯ ಮಾಡುವಂತಿರಲಿಲ್ಲ. ಮರುದಿನ ಬಾಲಕನ ಹೆತ್ತವರು 20,000 ರೂ. ಕೊಂಡೊಯ್ದು ಆತನನ್ನು ಕಾಲೇಜಿಗೆ ದಾಖಲು ಮಾಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಶ್ರೀದೇವಿ ಟೀಚರ್ ತಮ್ಮ ಒಡವೆಗಳನ್ನು ಒತ್ತೆಯಿಟ್ಟು ಆತನ ಕಾಲೇಜು ಫೀಸ್‌ಗೆ ಹಣ ಹೊಂದಿಸಿದ್ದರೆಂದು ನಂತರವಷ್ಟೇ ತಿಳಿದು ಬಂದಿತ್ತು.

ಆಕೆಯ ಈ ಕಾರ್ಯವನ್ನು ಗುರುತಿಸಿದ ಸಂಸ್ಥೆ ಆಕೆಯನ್ನು ಸನ್ಮಾನಿಸಿತ್ತಲ್ಲದೆ ಅದರ ಟ್ರಸ್ಟಿ ಝಕಿ ಅಬ್ಬಾಸ್ ನಾಸೆರ್ ಇಬ್ಬರೂ ಸಹೋದರರ ಶೈಕ್ಷಣಿಕ ಶುಲ್ಕ 23,000 ರೂ. ಭರಿಸುವ ಭರವಸೆಯಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News