ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ

Update: 2016-06-09 18:02 GMT

ಹೊಸದಿಲ್ಲಿ, ಜೂ.9: ಭಾರತವು ತನ್ನ ಅತ್ಯಾಧುನಿಕ ಯುದ್ಧ ಹಡಗು ಕ್ಷಿಪಣಿ ವ್ಯವಸ್ಥೆಯನ್ನು ವಿಯೆಟ್ನಾಂಗೆ ಮಾರಾಟ ಮಾಡುವ ಪ್ರಯತ್ನವನ್ನು ಹೆಚ್ಚಿಸಿದೆ. ಅಲ್ಲದೆ ಅದು ಇನ್ನೂ ಕನಿಷ್ಠ 15 ಮಾರುಕಟ್ಟೆಗಳನ್ನು ಗಮನದಲ್ಲಿರಿಸಿಕೊಂಡಿದೆ. ಈ ಪ್ರಯತ್ನವು ಚೀನಾದ ಹೆಚ್ಚುತ್ತಿರುವ ಮಿಲಿಟರಿ ದೃಢತೆಯ ಬಗ್ಗೆ ಹೊಸದಿಲ್ಲಿಯ ಕಳವಳವನ್ನು ಪ್ರತಿಫಲಿಸುತ್ತದೆಂದು ಪರಿಣತರು ಅಭಿಪ್ರಾಯಿಸಿದ್ದಾರೆ.
ಭಾರತ-ರಶ್ಯ ಜಂಟಿ ಸಾಹಸದ ಉತ್ಪನ್ನವಾಗಿರುವ ಶಬ್ದಾತೀತ ವೇಗದ ಬ್ರಹ್ಮೋಸ್ ಕ್ಷಿಪಣಿಯ ಮಾರಾಟವು ವಿಶ್ವದ ಬಹು ದೊಡ್ಡ ಶಸ್ತ್ರಾಸ್ತ್ರ ಆಮದುಗಾರ ರಾಷ್ಟ್ರಕ್ಕೆ ಬದಲಾವಣೆಯ ಸಂಕೇತವಾಗಿರುತ್ತದೆ. ಭಾರತವು ರಕ್ಷಣಾ ಭಾಗಿದಾರರನ್ನು ಪಡೆಯಲು ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೇರೆ ರೀತಿಯಿಂದಾದರೂ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಮಾರ್ಗ ಹುಡುಕುತ್ತಿದೆ.
ಪ್ರಧಾನವಾಗಿ ವಿಯೆಟ್ನಾಂ ಸೇರಿದಂತೆ 5 ದೇಶಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳ ಮಾರಾಟದ ವೇಗ ವರ್ಧಿಸುವಂತೆ ಕ್ಷಿಪಣಿ ತಯಾರಕ ಬ್ರಹ್ಮೋಸ್ ಏರ್‌ಸ್ಪೇಸ್‌ಗೆ ಸರಕಾರ ಆದೇಶ ನೀಡಿದೆಯೆಂದು ರಾಯ್ಟರ್ ಸುದ್ದಿ ಸಂಸ್ಥೆಗೆ ಲಭಿಸಿರುವ, ಅಪ್ರಕಟಿತ ಸರಕಾರಿ ಟಿಪ್ಪಣಿಯೊಂದು ತಿಳಿಸಿದೆ. ಇಂಡೋನೇಶ್ಯ, ದಕ್ಷಿಣ ಆಫ್ರಿಕ, ಚಿಲಿ ಹಾಗೂ ಬ್ರೆಝಿಲ್ ಇತರ ನಾಲ್ಕು ರಾಷ್ಟ್ರಗಳಾಗಿವೆ.

ಬ್ರಹ್ಮೋಸ್ ಕ್ಷಿಪಣಿಗಾಗಿ 2011ರಲ್ಲಿ ಹನೋಯಿ ದೇಶವು ಮುಂದಿಟ್ಟ ಬೇಡಿಕೆಯನ್ನು ಭಾರತವು, ಚೀನಾಕ್ಕೆ ಕೋಪ ಬರಬಹುದೆಂಬ ಹೆದರಿಕೆಯಿಂದ ಅಡಿಯಲ್ಲಿರಿಸಿದೆ. ಶಬ್ದದ ವೇಗದ 3 ಪಟ್ಟು ವೇಗವುಳ್ಳ ಹಾಗೂ ವಿಶ್ವದ ಅತೀ ಹೆಚ್ಚು ವೇಗದ ಕ್ಷಿಪಣಿಯೆಂದು ಖ್ಯಾತಿ ಹೊಂದಿರುವ ಈ ಕ್ಷಿಪಣಿ ಅಸ್ಥಿರತೆ ಉಂಟುಮಾಡಬಹುದೆಂದು ಚೀನಾ ಅಭಿಪ್ರಾಯಿಸಿದೆ.
ಬ್ರಹ್ಮೋಸ್ ಕ್ಷಿಪಣಿ ಹಡಗಿನಿಂದ, ವಿಮಾನದಿಂದ, ನೆಲದಿಂದ ಹಾಗೂ ಜಲಾಂತರ್ಗಾಮಿಗಳಿಂದ ಹಾರಿಸಬಲ್ಲ ವ್ಯವಸ್ಥೆಯುಳ್ಳದ್ದಾಗಿದೆ.
ಅಮೆರಿಕ, ಜಪಾನ್ ಹಾಗೂ ವಿಯೆಟ್ನಾಂಗಳೊಂದಿಗಿನ ಪ್ರಬಲ ರಕ್ಷಣಾ ಸಂಬಂಧವು ವಾಸ್ತವವಾಗಿ ಚೀನಾದೊಂದಿಗಿನ ತನ್ನ ವ್ಯವಹಾರಗಳಿಗೆ ಗಟ್ಟಿ ನೆಲೆಯೊದಗಿಸುತ್ತದೆಂದು ತೀರ್ಮಾನಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಲಹೆಗಾರರ ತಂಡ ಚೀನಾದ ತಲೆಯಲ್ಲಿರುವ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ವಾಷಿಂಗ್ಟನ್‌ನ ಅಮೆರಿಕನ್ ವಿದೇಶಾಂಗ ನೀತಿ ಮಂಡಳಿಯ ಏಶ್ಯನ್ ಭದ್ರತಾ ಕಾರ್ಯಕ್ರಮದ ನಿರ್ದೇಶಕ ಜೆಫ್ ಎಂ. ಸ್ಮಿತ್ ಹೇಳಿದ್ದಾರೆ.
ಕೇವಲ ಕ್ಷಿಪಣಿಗಳನ್ನು ನೀಡುವ ಬದಲು ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿಗಳಿಂದ ಸನ್ನದ್ಧ ಯುದ್ಧ ಹಡಗನ್ನೇ ಕೊಡುವ ಪ್ರಸ್ತಾಪವೊಂದನ್ನು ಭಾರತ ಸರಕಾರ ಪರಿಶೀಲಿಸುತ್ತಿದೆ.
ಭಾರತದ ಯುದ್ಧ ಹಡಗುಗಳಲ್ಲಿ 8 ಅಥವಾ 16 ಬ್ರಹ್ಮೋಸ್ ಕ್ಷಿಪಣಿಗಳಿವೆ. ಸಣ್ಣ ಹಡಗುಗಳಲ್ಲಿ 2 ಅಥವಾ 4 ಕ್ಷಿಪಣಿಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News