‘ಉಡ್ತಾ ಪಂಜಾಬ್’ ವಿವಾದ: ಸೆನ್ಸಾರ್ ಮಂಡಳಿ ಅಧ್ಯಕ್ಷನಿಗೆ ಹೈಕೋರ್ಟ್ ತೀವ್ರ ತರಾಟೆ

Update: 2016-06-10 13:22 GMT

ಮುಂಬೈ, ಜೂ.10: ‘‘ನಿಮ್ಮ ಕೆಲಸ ಚಲನಚಿತ್ರಗಳಿಗೆ ಪ್ರಮಾಣ ಪತ್ರ ನೀಡುವುದೇ ಹೊರತು ಅವುಗಳಿಗೆ ಕತ್ತರಿ ಹಾಕುವುದಲ್ಲ’’ ಎಂದು ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹಲಾನಿಯವರಿಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಬಾಲಿವುಡ್ ಚಿತ್ರ ‘ಉಡ್ತಾ ಪಂಜಾಬ್’ಗೆ ಬರೋಬ್ಬರಿ 89 ಕತ್ತರಿ ಪ್ರಯೋಗಗಳನ್ನು ಮಾಡಿದುದಕ್ಕಾಗಿ ನಿಹಲಾನಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ಅವರ ಫ್ಯಾಂಟಂ ಫಿಲ್ಮ್ಸ್ ಈ ಸಂಬಂಧ ಮಂಡಳಿಯನ್ನು ನ್ಯಾಯಾಲಯಕ್ಕೆಳೆದಿತ್ತು.

ಸೆನ್ಸಾರ್ ಎಂಬ ಶಬ್ದ ಕಾಯ್ದೆಯಲ್ಲಿ ಎಲ್ಲಿಯೂ ಇಲ್ಲ. ಚಿತ್ರದ ಸಾರ್ವಜನಿಕ ಪ್ರದರ್ಶನಕ್ಕಾಗಿ ಪ್ರಮಾಣ ಪತ್ರ ನೀಡುವುದಷ್ಟೇ ಮಂಡಳಿಯ ಕೆಲಸವಾಗಿದೆಯೆಂದು ನ್ಯಾಯಾಲಯ ಇಂದು ಹೇಳಿದೆ.

ಮಂಡಳಿಯು ಆದೇಶಿಸಿರುವ ಕತ್ತರಿ ಪ್ರಯೋಗವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿರುವ ಮನವಿಯ ಕುರಿತ ತೀರ್ಪನ್ನು ಹೈಕೋರ್ಟ್ ಸೋಮವಾರ ನೀಡಲಿದೆ.

‘‘ಚಿತ್ರದ ಕುರಿತು ಸೆನ್ಸಾರ್ ಮಂಡಳಿಯು ಯಾಕೆ ಇಂತಹ ಗಲಾಟೆ ಮಾಡಿದೆ? ಇದು ಆಕ್ಷೇಪಾರ್ಹ. ಜವಾಬ್ದಾರಿಯುತ ಜನರಾಗಿ ನಾವಿದನ್ನು ತಪ್ಪಿಸಲೇಬೇಕು. ಈಗಿನ ತಲೆಮಾರು ಸ್ವಲ್ಪ ಹೆಚ್ಚು ಪ್ರಬುದ್ಧವಾದುದನ್ನು ಬಯಸುತ್ತದೆ. ಆದರೆ, ನೀವು ಇಲ್ಲವೆನ್ನುತ್ತೀರಿ’’ ಎಂದು ನ್ಯಾಯಾಲಯ ಮಂಡಳಿಯನ್ನು ನಿನ್ನೆ ತರಾಟೆಗೆ ತೆಗೆದುಕೊಂಡಿತ್ತು.

ಪಂಜಾಬ್‌ನ ಮಾದಕ ದ್ರವ್ಯ ವ್ಯಸನದ ಕುರಿತು ಕತೆಯಿರುವ ಈ ಚಿತ್ರದಿಂದ ಪಂಜಾಬ್ ಸಹಿತ ರಾಜ್ಯದ ಇತರ ಸ್ಥಳಗಳ ಹೆಸರುಗಳು, ಚುನಾವಣೆ, ಶಾಸಕ ಹಾಗೂ ಸಂಸತ್ತುಗಳಂತಹ ಶಬ್ದಗಳನ್ನು ತೆಗೆಯಬೇಕೆಂದು ನಿಹಲಾನಿ ಆದೇಶಿಸಿದ್ದರು. ಪಂಜಾಬ್‌ನಲ್ಲಿ ಮುಂದಿನ ವರ್ಷಾರಂಭದಲ್ಲಿ ಚುನಾವಣೆ ನಡೆಯಲಿದೆ.

ಸೆನ್ಸಾರ್ ಕತ್ತರಿಯ ಕಾರಣಕ್ಕಾಗಿ ನಿಹಲಾನಿ, ಚಿತ್ರರಂಗದ ತೀವ್ರ ಟೀಕೆಗೆ ಗುರಿಯಾಗಿದ್ದರು. ಬಿಜೆಪಿಯ ಒತ್ತಾಸೆಯಂತೆ ಅವರು ಚಿತ್ರದ ಪ್ರದರ್ಶನ ತಡೆಯಲು ಪ್ರಯತ್ನಿಸುತ್ತಿದ್ದಾರೆಂದು ಕಾಂಗ್ರೆಸ್ ಹಾಗೂ ಎಎಪಿಗಳಂತಹ ಪಕ್ಷಗಳು ಆರೋಪಿಸಿದ್ದವು. ಬಿಜೆಪಿಯು ಪಂಜಾಬ್‌ನ ಆಳುವ ಅಕಾಲಿದಳದ ಮಿತ್ರ ಪಕ್ಷವಾಗಿದೆ.

ಆದರೆ, ಕೇಂದ್ರ ಸರಕಾರವು ಸೆನ್ಸಾರ್ ಮಂಡಳಿಯ ಕೆಲಸದಲ್ಲಿ ಎಂದೂ ಹಸ್ತಕ್ಷೇಪ ನಡೆಸಿಲ್ಲ. ಸೆನ್ಸಾರ್ ಮಂಡಳಿಯ ನಿರ್ಧಾರದ ಮೇಲೆ ಯಾವುದೇ ರಾಜಕೀಯ ಪ್ರಭಾವವಿಲ್ಲವೆಂದು ನಿಹಲಾನಿ ಹೇಳಿದ್ದರು.

ಕತ್ತರಿ ಪ್ರಯೋಗವು ಸಮರ್ಥನೀಯ ಹಾಗೂ ಬದ್ಧವೆಂದು ನ್ಯಾಯಾಲಯದಲ್ಲಿ ವಾದಿಸಿದ್ದ ಚಲನಚಿತ್ರ ಪ್ರಮಾಣ ಪತ್ರದ ಕೇಂದ್ರೀಯ ಮಂಡಳಿ (ಸಿಬಿಎಫ್‌ಸಿ), ರಾಜ್ಯವನ್ನು ಸರಿಯಾಗಿ ಬಿಂಬಿಸಬೇಕು ಎಂದಿತ್ತು.

ಆದರೆ, ಈ ವಾದದಿಂದ ತೃಪ್ತಿಯಾಗದ ನ್ಯಾಯಾಲಯ, ಚಿತ್ರದ ಹೆಸರಲ್ಲೇ ರಾಜ್ಯದ ಹೆಸರಿದೆ. ಕತೆಯು ರಾಜ್ಯದ್ದೇ ಆಗಿದೆ. ಅದು ರಾಜ್ಯದ ಜನರನ್ನು ಚಿತ್ರಿಸುತ್ತಿದೆಯೆಂದು ‘ಪಂಜಾಬ್’ ಹೆಸರಿನ ಕುರಿತು ನ್ಯಾಯಾಲಯ ಅಭಿಪ್ರಾಯಿಸಿತ್ತು.

‘ಉಡ್ತಾ ಪಂಜಾಬ್’ನ ಬಿಡುಗಡೆ ಜೂ.17ಕ್ಕೆ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News