ಡ್ಯಾನಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಐವರಿಗೆ ಜೀವಾವಧಿ ಶಿಕ್ಷೆ

Update: 2016-06-10 14:16 GMT

ಹೊಸದಿಲ್ಲಿ,ಜೂ.10: ಎರಡು ವರ್ಷಗಳ ಹಿಂದೆ ದಿಲ್ಲಿಯಲ್ಲಿ 52ರ ಹರೆಯದ ಡ್ಯಾನಿಷ್ ಪ್ರವಾಸಿ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಕ್ಕಾಗಿ ಐವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಐವರೂ ಅಪರಾಧಿಗಳೆಂದು ನ್ಯಾಯಾಲಯವು ಸೋಮವಾರ ಘೋಷಿಸಿತ್ತು.

  2014,ಜ.14ರಂದು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಮಧ್ಯ ದಿಲ್ಲಿಯಲ್ಲಿನ ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಮರಳುತ್ತಿದ್ದ ಮಹಿಳೆಯನ್ನು ತಂಡವು ದೋಚಿತ್ತು. ಬಳಿಕ ಆಕೆಯನ್ನು ಅಪಹರಿಸಿ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.

ಶಿಕ್ಷೆಯ ಪ್ರಮಾಣ ಪ್ರಕಟಗೊಂಡಾಗ ಅಪರಾಧಿಗಳಾದ ಮಹೇಂದ್ರ ಅಲಿಯಾಸ್ ಗಾಂಜಾ(27),ಮೊಹ್ದ್ ರಾಜಾ(23),ರಾಜು(24),ಅರ್ಜುನ್(22) ಮತ್ತು ರಾಜು ಚಕ್ಕಾ(23) ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

ಇತರ ಮೂವರು ಬಾಲಾಪರಾಧಿಗಳಾಗಿದ್ದು,ಬಾಲ ನ್ಯಾಯ ವ್ಯವಸ್ಥೆಯಡಿ ಅವರ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದೆ. ಒಂಭತ್ತನೇ ಆರೋಪಿಯಾಗಿದ್ದ ವಯಸ್ಕ ವ್ಯಕ್ತಿ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News